Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಂಸದರು ಸುಳ್ಳು ಹೇಳುವುದನ್ನು ಬಿಡಬೇಕು

ಸಂಸದೆ ಸುಮಲತಾ ಅವರು ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಇನ್ನು ಮುಂದಾದರೂ ಜನರ ಕೆಲಸಗಳನ್ನು ಮಾಡಲಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸಲಹೆ ನೀಡಿದರು.

ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೆಲಮನೆಯಿಂದ -ಚನ್ನರಾಯಪಟ್ಟಣ ಹೆದ್ದಾರಿ ಸಂಪರ್ಕಿಸುವ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮನ್ನು ಜನರು ಆಯ್ಕೆ ಮಾಡಿ ಕಳುಹಿಸಿರುವುದು ಅಭಿವೃದ್ಧಿ ಕೆಲಸ ಮಾಡಲು ನಾವು ಜನರಿಗೆ ಸುಳ್ಳು ಹೇಳಬಾರದು. ಆದರೆ ಸಂಸದರು ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ ನೂರಾರು ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಸಚಿವರುಗಳನ್ನು ಭೇಟಿಯಾಗಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಜಿ ಕೊಟ್ಟು ಪರಿಹರಿಸಿದ್ದೇನೆ ಎಂದು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಡುವ ಮೂಲಕ ಸಂಸದರು ಅವರ ಹಳೇ ಜೀವನವಾದ ಸಿನಿಮಾ ನಟನೆಯನ್ನು ಇನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.

ಸಂಸದರು ಬದಲಾವಣೆಯಾಗಿ ಸಮಾಜ ಸೇವೆ ಮಾಡಲು ಬಂದಿದ್ದಾರೆ.ನೈಜತೆಯನ್ನು ಜನರ ಮುಂದೆ ಇಟ್ಟು ಅವರ ಜೊತೆಯಲ್ಲಿರಬೇಕು, ಹಳೇ ಲೆಕ್ಕಾಚಾರದಲ್ಲೇ ಮುಂದುವರಿದರೆ ಪ್ರಯೋಜನವಾಗುವುದಿಲ್ಲ. ಅದು ಬಹಳ ದಿನ ಬಾಳಿಕೆಗೆ ಬರುವುದಿಲ್ಲ ಎಂದು ಕಿಡಿಕಾರಿದರು.

ತಾಲೂಕಿನ ಅರಕೆರೆ, ಅಲ್ಲಾಪಟ್ಟಣ, ಬೆಳಗೊಳ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಕಳೆದೊಂದು ವಾರದಿಂದ ಸತತವಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಮುಂದಾಗಿದ್ದೇನೆ. ಆದರೆ ಇಲ್ಲಿನ ಮಾಜಿ ಶಾಸಕರು ಅದನ್ನು ತಡೆಯಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಕೆಲಸಗಳು ನಡೆಯುತ್ತಿರುವುದನ್ನು ಜನರು ಕಣ್ಣಿನಿಂದ ನೋಡುತ್ತಿದ್ದಾರೆ. ಬಡವರಿಗೆ ಹಂಚುವ ನಿವೇಶಗಳನ್ನು ಕೊಡುವುದು ಬೇಡ ಎಂದು ಮಾಜಿ ಶಾಸಕರು ಹೇಳುತ್ತಿರುವುದನ್ನು ನೋಡುತ್ತಿದ್ದಾರೆ ಎಂದರು.

ಸತತವಾಗಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಪತ್ರಗಳನ್ನು ಜನರಿಗೆ ಕೊಟ್ಟಾಗಿದೆ. ಇನ್ನು ಉಳಿದಿರುವುದನ್ನು ನೀಡಲು ಮುಂದಾಗಿದ್ದೇನೆ. ಆದರೆ ಮಾಜಿ ಶಾಸಕರು ಆ ನಿವೇಶನದಲ್ಲಿ ಭವನ ನಿರ್ಮಿಸಬೇಕು ಎಂದು ಬಡವರ ನಿವೇಶನ ಹಂಚಿಕೆಯನ್ನು ತಡೆ ಮಾಡಿರುವ ಬಗ್ಗೆ ಜನರು ತಿಳಿದುಕೊಂಡಿದ್ದಾರೆ. ಯಾರು ಇವತ್ತು ದಡ್ಡರಾಗಿಲ್ಲ. ಸುಳ್ಳುಗಳು ಬಹು ಬೇಗ ಹೊರ ಬರುತ್ತವೆ ಎಂದರು.

ಕ್ಷೇತ್ರದ ಎಲ್ಲಾ ಹೋಬಳಿಗಳಿಗೆ ಅನುದಾನವನ್ನು ಸಮನಾಗಿ ಹಂಚಿಕೆ ಮಾಡಿದ್ದೇನೆ. ಒಂದು ಹೋಬಳಿಗೆ ಹೆಚ್ಚು ಮತ್ತೊಂದು ಹೋಬಳಿಗೆ ಕಡಿಮೆ ಮಾಡಿಲ್ಲ. ಎಲ್ಲಾ ಭಾಗಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ ಎಂದರು.

ನೆಲಮನೆ, ದರಸಗುಪ್ಪೆ, ಹನುಮಂತ ನಗರ ಹಾಗೂ ಬಲ್ಲೇನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ