Monday, November 23, 2026

ಪ್ರಾಯೋಗಿಕ ಆವೃತ್ತಿ

ಎದೆಕೊಟ್ಟು ನಿಲ್ಲುತ್ತಾರೆ ಹೊರತು ಪಲಾಯನ ಮಾಡಲ್ಲ

ಕಾರಿಗೆ ಮೊಟ್ಟೆ ಎಸೆದ ತಕ್ಷಣ ಭಯ ಪಡುವುದಕ್ಕೆ ಸಿದ್ದರಾಮಯ್ಯ ಸಾರ್ವಕರ್ ಅಲ್ಲ. ಅವರು ಸ್ವಾತಂತ್ರ್ಯಹೋರಾಟಗಾರ ಸಂಗೊಳ್ಳಿ ರಾಯಣ್ಣ ವಂಶದವರು. ಎದೆಕೊಟ್ಟು ನಿಲ್ಲುತ್ತಾರೆಯೇ ಹೊರತು ಪಲಾಯನ ಮಾಡುವುದಿಲ್ಲ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು ಗುಡುಗಿದರು.

ಮಳವಳ್ಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಕೊಡುಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೊಟ್ಟೆ ಹೊಡೆದಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ನೆರೆ ಹಾನಿ ವೀಕ್ಷಣೆಗೆ ಆಗಮಿಸಿದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ 75 ನೇ ಅಮೃತ ಮಹೋತ್ಸವಕ್ಕೆ ಸೇರಿದ್ದ ಜನಸಂಖ್ಯೆಯನ್ನು ಕಂಡು ಸಹಿಸಿಕೊಳ್ಳಲಾಗದೇ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇತಂಹ ಬೆದರಿಕೆಗೆ ಸಿದ್ದರಾಮಯ್ಯ ಅವರು ಎಂದಿಗೂ ಬಗ್ಗುವುದಿಲ್ಲ ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ ಮಾತನಾಡಿ, ಸಿದ್ದರಾಮಯ್ಯ
ಅವರ ಕಾರಿಗೆ ಮೊಟ್ಟೆ ಹೊಡೆದರೇ ಅವರ ಘನತೆ ಕಡಿಮೆಯಾಗುವುದಿಲ್ಲ, ಇಂತಹ ಪ್ರತಿಭಟನೆಗಳಿಗೆ ಸಿದ್ದರಾಮಯ್ಯ ಅವರು ಎಂದಿಗೂ ಹೆದರುವುದಿಲ್ಲ. ಬಿಜೆಪಿ ಸರ್ಕಾರ ಕೂಡಲೇ ಈ ಕೃತ್ಯ ಎಸಗಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಮಹದೇವು ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರುತ್ತಿರುವುದು ಖಂಡನೀಯ. ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರನ್ನು ಗೌರವಿಸಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಬಿಜೆಪಿ ಸರ್ಕಾರದ ಆಡಳಿತದಲ್ಲಿ ವ್ಯಕ್ತಿಗಳ ಮೇಲೆ ದಾಳಿ ಸೇರಿದಂತೆ ಕೋಮು ಗಲಭೆಗಳು ನಿರಂತರವಾಗಿ ನಡೆಯುತ್ತಿರುವುದು ಅಭಿವೃದ್ದಿಗೆ ಮಾರಕವಾಗಿದೆ ಎಂದು ಕಿಡಿಕಾರಿದರು.

ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ, ಕೂಡಲೇ ಕೃತ್ಯ ಎಸಗಿರುವವರನ್ನು ಬಂಧಿಸಬೇಕು. ಇಲ್ಲದಿದ್ದರ ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ಚಂದ್ರು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸುಂದರ್‌ರಾಜ್. ಕಾಂಗ್ರೆಸ್ ಮುಖಂಡರಾದ ಚಿಕ್ಕಲಿಂಗಯ್ಯ, ಮಾರ್ಕಾಲು ಸಿ, ಮಾಧು, ವಿಶ್ವಾಸ್, ಶಿವಲಿಂಗಯ್ಯ, ಅಂಬರೀಶ್, ಶಿವರಾಜು, ಓಂ ಪ್ರಕಾಶ್, ಕಲೀಂ ಉಲ್ಲಾ, ಗವಿಸಿದ್ದಯ್ಯ, ಶಿವಕುಮಾರ್ ಚಿಕ್ಕಸ್ವಾಮಿ
ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ