ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹಲವು ಬೇಡಿಕೆಗಳನ್ನು ಸಚಿವರು ಈಡೇರಿಸುವ ಭರವಸೆ ನೀಡಿದ್ದರಿಂದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದ ಖಜಾಂಚಿ ಡಾ.ಯೋಗೇಂದ್ರಕುಮಾರ್ ತಿಳಿಸಿದರು.
ಮಂಡ್ಯ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದ ಖಜಾಂಚಿ ಡಾ.ಯೋಗೇಂದ್ರ ಕುಮಾರ್ ನೇತೃತ್ವದಲ್ಲಿ ಕಳೆದ 22 ದಿನಗಳಿಂದ ನಡೆದ ಧರಣಿಯು ಇಂದು ಅಂತ್ಯಗೊಂಡಿತು.
ಡಾ.ಯೋಗೇಂದ್ರ ಕುಮಾರ್ ಮಾತನಾಡಿ,ರಾಜ್ಯದಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ವೈದ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಮಾದರಿಯಂತೆ ಏಕರೂಪ ವೇತನ ನೀಡುವುದು ಅಗತ್ಯವಿದೆ. 2018 ರ ಹೈಕೋರ್ಟ್ ಆದೇಶದಂತೆ ನೂತನ ಪರಿಷ್ಕೃತ ರಾಜ್ಯ ಸರ್ಕಾರಿ ವೇತನ ಶ್ರೇಣಿಯಂತೆ ವೇತನ ನೀಡಲು ಆಗ್ರಹಿಸಿ ಧರಣಿ ನಡೆಸುತ್ತಿದ್ದೆವು.
ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ರಾಜ್ಯಾದ್ಯಂತ ವಾಪಸ್ ಪಡೆದಿದ್ದೇವೆ ಎಂದು ತಿಳಿಸಿದರು.
ಸಿಎಂಒ/ಐಸಿಎಂಒಗಳಿಗೆ ವಿಶೇಷ ಭತ್ಯೆ ತಡೆಹಿಡಿದ 2022 ರ ಸರ್ಕಾರಿ ಆದೇಶ ರದ್ದು ಮಾಡಿ, ಭ್ಯತೆ ಮುಂದುವರಿಸಿ, ಇಲ್ಲದಿದ್ದರೆ ರಾಜ್ಯಾದಂತ್ಯ ಹೋರಾಟ ನಡೆಸಲಾಗುವುದು, ಸಾಂಕೇತಿಕವಾಗಿ ಮಂಡ್ಯ ನಗರದಲ್ಲಿ ಧರಣಿ ಆರಂಭಿಸಿ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಎಲ್ಲರೂ ಇಲ್ಲಿಗೆ ಬಂದು ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯಲು ಯಶಸ್ವಿಯಾದರು.
ವೈದ್ಯರುಗಳ ಪ್ರತಿಭಟನೆ ಮತ್ತು ಧರಣಿಯು 10 ದಿನಗಳವರೆಗೆ ನಿರ್ಧಾರವಾಗಿತ್ತು. ಆ.15ರಂದು ರಾಜ್ಯ ಸರ್ಕಾರದ ವಿರುದ್ಧ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ರಕ್ತದಾನ ಮಾಡುವ ಮೂಲಕ ವಿನೂತನ ಚಳುವಳಿಯನ್ನು ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದವು ಎಂದು ಸ್ಮರಿಸಿದರು.
ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಧರಣಿಗೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಹೋರಾಟಗಾರ ವೆಂಕಟಗಿರಿಯಯ್ಯ, ಸ್ಥಳೀಯ ನಗರಸಭಾ ಸದಸ್ಯರು ಮತ್ತು ಮಾಧ್ಯಮದವರು ಬೆಂಬಲ ನೀಡಿದರು ಎಂದು ಅವರಿಗೆ ಕೃತಜ್ಞತೆ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭೋದಕೇತರ ವೃಂದಕ್ಕೆ ಒಳಪಡುವ ವೈದ್ಯಾಧಿಕಾರಿಗಳ ಹುದ್ದೆಗಳ ಪಟ್ಟಿ ಪ್ರಕಟಿಸಬೇಕು.ಬೋಧಕೇತರ ವೈದ್ಯರಿಗೆ ಕಲಾಬದ್ಧ ಪದೋನ್ನತಿ ಹಾಗೂ ಉನ್ನತ ಹುದ್ದೆಗಳಿಗೆ ಪದೋನ್ನತಿ ನೀಡುವ ಏಕರೂಪ ನಿಯಮಾವಳಿ ಪ್ರಕಟಿಸಬೇಕು.ಏಕರೂಪ ಸಿಆಂಡ್ಆರ್ ವೃಂದ ನಿಯಮಾವಳಿ ತುರ್ತಾಗಿ ಮಾಡಬೇಕು. ತಜ್ಞ ವೈದ್ಯರನ್ನು ಆಯಾ ವಿಭಾಗಗಳಲ್ಲಿ ರೋಗಿಗಳ ಸೇವೆ ಸಲ್ಲಿಸಲು ಆವಕಾಶ ನೀಡಬೇಕು.
ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇಮಕಾತಿ ಮಾಡುವ ಸಂದರ್ಭದಲ್ಲಿ ಬೋಧಕೇತರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯರುಗಳನ್ನು ಪರಿಗಣಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ನಮ್ಮಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.




