Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಎಲ್ಲಾ ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಿಸಿ ; ರೈತಸಂಘದ ಬೃಹತ್ ಪ್ರತಿಭಟನೆ

ಮಂಡ್ಯ: ಮಂಡ್ಯ ಜಿಲ್ಲೆಯ ಎಲ್ಲ 7 ತಾಲ್ಲೂಕುಗಳನ್ನು `ಬರ ಪ್ರದೇಶಗಳು’ ಎಂದು ಘೋಷಣೆ ಮಾಡಿರುವುದರಿಂದ ರೈತರು, ಕೃಷಿ ಕಾರ್ಮಿಕರು ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಎಲ್ಲ ರೀತಿಯ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ರೈತರ ಸಾಲ ಮನ್ನಾ ಮಾಡುವುದರ ಜತೆಗೆ ಕುಟುಂಬದ ನಿರ್ವಹಣೆಗೆ ಹೊಸದಾಗಿ ಸಾಲಗಳನ್ನು ನೀಡಬೇಕು. ಬರ ಪರಿಹಾರ ಮತ್ತು ಬೆಳೆ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಿ ರೈತರ ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಒತ್ತಾಯಗಳು:

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ 50 ರೂ. ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ ಕಬ್ಬಿಗೆ ಟನ್ ಒಂದಕ್ಕೆ ಶೇ. 8.5 ಇಳುವರಿಗೆ 5 ಸಾವಿರ ರೂ. ನಿಗದಿಪಡಿಸಬೇಕು.

ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳಿAದ ಪಡೆದಿರುವ ಚಿನ್ನಾಭರಣಗಳ ಮೇಲಿನ ಸಾಲದ ಬಡ್ಡಿಯನ್ನು ರಿಯಾಯಿತಿ ನೀಡವಂತೆಯೂ ಯಾವುದೇ ಕಾರಣಕ್ಕೂ ಚಿನ್ನಾಭರಣಗಳನ್ನು ಬ್ಯಾಂಕ್‌ಗಳು ಹರಾಜು ಮಾಡಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಮನೆಗಳ ಮೇಲಿನ ಅಡಮಾನ ಸಾಲ ಇನ್ನಿತರೆ ಸಾಲಗಾರರಿಗೆ ಕಿರುಕುಳ ನೀಡಬಾರದು ಎಂದು ಸೂಚಿಸಬೇಕು.

ಕೆ.ಆರ್.ಎಸ್.ನಿಂದ ಬೆಂಗಳೂರಿಗೆ ಕುಡಿಯುವ ನೀರಿಗೋಸ್ಕರ ತರುತ್ತಿರುವ 6ನೇ ಹಂತದ ಯೋಜನೆಯನ್ನು ಶಾಶ್ವತವಾಗಿ ರದ್ದುಪಡಿಸಬೇಕು. ತಪ್ಪಿದ್ದಲ್ಲಿ ಮುಂದೆ ತೀವ್ರತರದ ಹೋರಾಟವನ್ನು ರೂಪಿಸಲಾಗುವುದು.
ಪದೇ ಪದೇ ತಮಿಳುನಾಡಿಗೆ ನೀರು ಬಿಡುವಂತೆ ಸಿ.ಡಬ್ಲ್ಯೂ.ಆರ್.ಸಿ. ಮತ್ತು ಸಿ.ಡಬ್ಲ್ಯೂ.ಎಂ.ಎ. ಆದೇಶಗಳನ್ನು ಜಿಲ್ಲಾ ರೈತ ಸಂಘವು ಖಂಡಿಸುತ್ತದೆ. ನೀರನ್ನು ಪರಿಶೀಲನೆ ಮಾಡಲು ಕೆ.ಆರ್.ಎಸ್. ಹಾಗೂ ಹೇಮಾವತಿ ಜಲಾಶಯಗಳಿಗೆ ಅಧ್ಯಯನ ತಂಡವನ್ನು ರಚಿಸಲು ಕೇಂದ್ರ ಸರ್ಕಾರದ ಮೇಲೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಒತ್ತಡ ತರಬೇಕು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಈ ಹಿಂದೆ ನಡೆದಿದ್ದ ಹಾಲು-ನೀರು ಹಗರಣದಲ್ಲಿ ಸಿ.ಐ.ಡಿ. ತನಿಖೆಯಿಂದ ಯಾವುದೇ ಸತ್ಯ ಹೊರಬರದಿರುವ ಕಾರಣ ಸಿ.ಬಿ.ಐ.ಗೆ ಒಪ್ಪಿಸಬೇಕು. ಹಾಲಿನ ಪುಡಿ ಕಲಬೆರಕೆ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಪೊಲೀಸ್ ಇಲಾಖೆಯು ಯಾವುದೇ ಕ್ರಮ ಜರುಗಿಸಿರುವುದಿಲ್ಲ, ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಒಕ್ಕೂಟಕ್ಕೆ ಉಂಟಾಗಿರುವ ನಷ್ಟವನ್ನು ಸದರಿಯವರಿಂದ ಭರಿಸಬೇಕು ಮತ್ತು ಅವರನ್ನು ಕಾನೂನಿನ ರೀತ್ಮಾ ಶಿಕ್ಷೆಗೆ ಗುರಿಪಡಿಸಬೇಕು.

ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎಸ್.ಲಿಂಗಪ್ಪಾಜಿ, ರವಿಕುಮಾರ್, ಎಂ.ಎಸ್. ವಿಜಯ್ ಕುಮಾರ್, ಪಿ.ನಾಗರಾಜು ಕೆನ್ನಾಳು, ಪಿ.ಬಾಲಕೃಷ್ಣ, ಬೋರಾಪುರ ಶಂಕರೇಗೌಡ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ