Monday, November 23, 2026

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಖಾಸಗೀಕರಣ ಕುರಿತು ನಿರಾಣಿ ಹೇಳಿಕೆ : ರೈತ ಹಿತರಕ್ಷಣಾ ಸಮಿತಿ ಖಂಡನೆ

ಮಂಡ್ಯ : ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) ಅನ್ನು ಜಾಗತಿಕ ಟೆಂಡರ್ ಕರೆದು ಖಾಸಗಿ ವಲಯಕ್ಕೆ ನೀಡಲು ಮುರುಗೇಶ್ ನಿರಾಣಿ ಅವರು ನೀಡಿರುವ ಹೇಳಿಕೆಗೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ತೀವ್ರ ಖಂಡನೆ ವ್ಯಕ್ತಪಡಿಸಿ, ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ಮುಖಂಡರಾದ ಸುನಂದ ಜಯರಾಂ ಅವರು, ಮುರುಗೇಶ್ ನಿರಾಣಿ ಅವರು ದಶಕಗಳಿಂದಲೂ ಮೈಸೂರು ಸಕ್ಕರೆ ಕಾರ್ಖಾನೆಯನ್ನು ತಮ್ಮ ಹತೋಟಿಗೆ ಪಡೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಕಾರ್ಖಾನೆಯು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ ಹಾಗೂ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆಯು ಖಾಸಗಿ ವಲಯಕ್ಕೆ ಸೇರಲು ಮಂಡ್ಯ ರೈತರು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ ಕಾರ್ಖಾನೆಯು ಕಬ್ಬು ನುರಿಸುತ್ತಿದೆ. ಮುಂದಿನ ದಿನಗಳಲ್ಲಿ ಬಾಯ್ಲಿಂಗ್ ಹೌಸ್ ಕೂಡ ಸಿದ್ಧವಾಗುತ್ತಿದೆ. ಕಾರ್ಖಾನೆಯು ಎಲ್ಲಾ ಹಂತದಲ್ಲೂ ತನ್ನ ಸಾಮರ್ಥ್ಯ ಹೊಂದಿದೆ. ಸರ್ಕಾರ ಕೂಡ ಕಾರ್ಖಾನೆಯನ್ನು ನಡೆಸಲು ಬದ್ಧವಾಗಿದೆ. ಹೋರಾಟದ ಮೂಲಕ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿರುವ ಮಂಡ್ಯ ರೈತರು, ಕಾರ್ಖಾನೆಯನ್ನು ಖಾಸಗಿ ವ್ಯವಸ್ಥೆಗೆ ಸೇರಿಸುವ ಬಗ್ಗೆ ಮಾತನಾಡುವವರು ಯಾರೇ ಆಗಲಿ ಅದನ್ನು ಸಹಿಸುವುದಿಲ್ಲ. ನಿರಾಣಿಯವರು ಮಾಜಿ ಕೈಗಾರಿಕಾ ಸಚಿವರಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ನೀಡುವ ತಮ್ಮ ಧೋರಣೆಯನ್ನು ಮರೆತುಬಿಡಬೇಕು. ಒಂದು ವೇಳೆ ಅಕಸ್ಮಾತ್ ಮತ್ತೆ ಈ ರೀತಿಯ ಹೇಳಿಕೆ, ಆಲೋಚನೆ ಮಾಡುವುದಾದರೆ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಶುಗರ್ ಕಾರ್ಖಾನೆಯ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮೂರು ತಿಂಗಳಿಗೊಮ್ಮೆ ರೈತರ ಜೊತೆ ಕಾರ್ಖಾನೆಯ ಆಡಳಿತ ಮಂಡಳಿ ಸಭೆ ಕರೆಯುತ್ತಿರಬೇಕು. ಶತಮಾನೋತ್ಸವ ಆಚರಿಸಲು ಸಿದ್ಧವಾಗುತ್ತಿರುವ ಕಾರ್ಖಾನೆಯ ಬಗ್ಗೆ ಚುರುಕಾಗಿ ಗಮನ ಕೊಡಬೇಕು ಎಂದು ಸಮಿತಿ ಎಚ್ಚರಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ