ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪೋಕ್ಸೋ ಪ್ರಕರಣದಲ್ಲಿ ಆರು ದಿನಗಳ ನಂತರ ಕೊನೆಗೂ ಪೋಲಿಸರು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 26 ರಂದು ಅಪ್ರಾಪ್ತ ಬಾಲಕಿಯರು ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿ ಎಫ್ಐಆರ್ ದಾಖಲಾಗಿದ್ದರೂ ಅವರನ್ನು ಬಂಧಿಸಿರಲಿಲ್ಲ.
ಇಂದು ರಾತ್ರಿ ಹತ್ತು ಗಂಟೆ ವೇಳೆಗೆ ಮುರುಘಾಶ್ರೀ ಅವರನ್ನು ಚಿತ್ರದುರ್ಗ ಪೋಲಿಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಾಗಿ ಆರು ದಿನ ಕಳೆದರೂ ಶ್ರೀಗಳ ಬಂಧನವಾಗಿಲ್ಲ ಎಂದು ರಾಜ್ಯದಾದ್ಯಂತ ಹಲವು ಪ್ರತಿಭಟನೆಗಳು ನಡೆದು ಮೊದಲು ಮುರುಘಾಶ್ರೀ ಬಂಧಿಸಬೇಕೆಂದು ಒತ್ತಾಯಿಸಿದ್ದರು. ಆದರೂ ಪ್ರಭಾವಿ ಸ್ವಾಮೀಜಿಯನ್ನು ಬಂಧಿಸಿರಲಿಲ್ಲ.
ರಾಷ್ಟ್ರೀಯ ಮಕ್ಕಳ ಆಯೋಗ ಸೇರಿದಂತೆ ಹಲವು ಸಂಘಟನೆಗಳು ಮುರುಘಾಶ್ರೀ ಬಂಧನಕ್ಕೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಪೋಲಿಸರು ಕೊನೆಗೂ ಮುರುಘಾಶ್ರೀಯನ್ನು ಬಂಧಿಸಿದ್ದಾರೆ.