Saturday, November 21, 2026

ಪ್ರಾಯೋಗಿಕ ಆವೃತ್ತಿ

ಪಾಕಿಸ್ತಾನ ಬಗ್ಗುಬಡಿದು ಏಷ್ಯಾ ಕಪ್ ಜಯಿಸಿದ ಶ್ರೀಲಂಕಾ


  • ದುಬೈನಲ್ಲಿ ನಡೆದ ಏಷ್ಯ ಕಪ್ ಫೈನಲ್ ಶ್ರೀಲಂಕಾಕ್ಕೆ ಕಿರೀಟ

  • 6 ನೇ ಬಾರಿ ಶ್ರೀಲಂಕಾ ಏಷ್ಯಾ ಕಪ್ ಜಯಿಸಿ ಕಿರೀಟ
  • ಚಮಿಕಾ ಕರುಣರತ್ನೆ ಮತ್ತು ಮಹೀಶ್ ತೀಕ್ಷಣ ಗೆಲುವಿನ ರೂವಾರಿ

ದುಬೈನಲ್ಲಿ ನಡೆದ ಏಷ್ಯ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ತಂಡವನ್ನು 23 ರನ್ ಗಳಿಂದ ಬಗ್ಗುಬಡಿದು ಗೆಲುವಿನ ನಗೆ ಬೀರಿದೆ.ಆರನೇ ಬಾರಿ ಶ್ರೀಲಂಕಾ ಏಷ್ಯಾ ಕಪ್ ಜಯಿಸಿ ಕಿರೀಟ ಮುಡಿಗೇರಿಸಿಕೊಂಡಿದೆ.

ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಭಾನುಕಾ ರಾಜಪಕ್ಸ (ಔಟಾಗದೆ 71 ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ,171 ರನ್ ಗಳ ಟಾರ್ಗೆಟ್ ನೀಡಿತ್ತು.

ನಂತರ 171 ರನ್ ಗಳಿಸಲು ಹೊರಟ ಪಾಕಿಸ್ತಾನ 20 ಓವರ್ ಗಳಲ್ಲಿ 147 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡುಸೋಲು ಅನುಭವಿಸಿತು.

ಶ್ರೀಲಂಕಾದ ಬೌಲರ್ ಪ್ರಮೋದ್ ಮಧುಶನ್ 34 ರನ್ ಗಳಿಗೆ 4 ವಿಕೆಟ್ ಗಳಿಸಿ ಪಾಕಿಸ್ತಾನ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಹಸರಂಗ 27 ಕ್ಜೆ 3 ವಿಕೆಟ್‌ ಗಳಿಸಿದರು. ಚಮಿಕಾ ಕರುಣರತ್ನೆ ಎರಡು ವಿಕೆಟ್ ಹಾಗೂ ಮಹೀಶ್ ತೀಕ್ಷಣ ಒಂದು ವಿಕೆಟ್‌ ಗಳಿಸಿ ಶ್ರೀಲಂಕಾ ಗೆಲುವಿನ ರೂವಾರಿಗಳಾದರು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕರಾಗಿ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಕಣಕ್ಕಿಳಿದರು. ಆದರೆ ತಂಡದ ಮೊತ್ತ 2 ರನ್‌ಗಳಾಗಿದ್ದಾಗ ಕುಸಲ್ ಮೆಂಡಿಸ್ ಶೂನ್ಯಕ್ಕೆ ಔಟಾದರು. ಇವರ ಬೆನ್ನಲ್ಲೇ 8 ರನ್ ಗಳಿಸಿ ಆಡುತ್ತಿದ್ದ ಪಾತುಮ್ ನಿಸ್ಸಾಂಕ ವಿಕೆಟ್ ಒಪ್ಪಿಸಿದರು. ನಂತರ ಬಂದ ಧನಂಜಯ ಡಿ ಸಿಲ್ವಾ 28 ರನ್ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಪ್ರಯತ್ನಿಸಿದರು.

ಇನ್ನು ಧನುಷ್ಕ ಗುಣತಿಲಕ 1 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ನಾಯಕ ದಸುನ್ ಶನಕ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರದೆ ಹೊರನಡೆದರು. ನಂತರ ಕ್ರೀಸ್‌ಗೆ ಭಾನುಕ ರಾಜಪಕ್ಸೆ ಅವರು ವನಿಂದು ಹಸರಂಗಾ ಜೊತೆ ಉತ್ತಮ ಮೊತ್ತ ಕಲೆ ಹಾಕಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

36 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವನಿಂದು ಹಸರಂಗಾ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಆಗ ತಂಡದ ಮೊತ್ತ 14.5 ಓವರ್‌ಗಳಲ್ಲಿ 116 ರನ್‌ಗಳು. ಮಧ್ಯಮ ಕ್ರಮಾಂಕದಲ್ಲಿ ಭಾನುಕ ರಾಜಪಕ್ಸೆ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಚಮಿಕಾ ಕರುಣಾರತ್ನೆ 14 ರನ್ ಗಳಿಸಿ ಅಜೇಯರಾಗುಳಿದರು.

ಇನ್ನು ಬೌಲಿಂಗ್‌ನಲ್ಲಿ ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ನಸೀಮ್ ಶಾ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು. ಶಾದಾಬ್ ಖಾನ್ 4 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಇಫ್ತಿಕರ್ ಅಹ್ಮದ್ ಒಂದು ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ ಕೇವಲ 147 ರನ್ ಗಳಿಸಿ 23 ರನ್ ಗಳ ಹೀನಾಯ ಸೋಲು ಅನುಭವಿಸಿದೆ.

ಪಾಕಿಸ್ತಾನ ಪರ ರಿಜ್ವಾನ್ 55ರನ್ ಗಳಿಸಿದರೆ,ನವಾಜ್ 31 ರನ್ ಗಳಿಸಿ ಔಟಾದರೆ ಉಳಿದವರು ರನ್ ಗಳಿಸುವಲ್ಲಿ ವಿಫಲರಾದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ