ವಸತಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ 6ನೇ ತರಗತಿಗೆ ನೇರ ಪ್ರವೇಶಾವಕಾಶವಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ಮನವಿ ಮಾಡಿದರು.
ಕೆ.ಆರ್.ಪೇಟೆ ಪುರಸಭಾ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ವಿವಿಧ ಗ್ರಾಮಗಳು, ಪುರಸಭೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 6ನೇ ತರಗತಿಗೆ ನೇರವಾಗಿ ಪ್ರವೇಶ ನೀಡಲಾಗುವುದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕಿನ ವ್ಯಾಪ್ತಿಯ ಜೈನಹಳ್ಳಿ, ಆದಿಹಳ್ಳಿ, ಗವಿಮಠ, ಮಾದಾಪುರ, ಸಾರಂಗಿ ಹಾಗೂ ಶೆಟ್ಟನಾಯಕನ ಕೊಪ್ಪಲಿನಲ್ಲಿರುವ ವಸತಿ ಶಾಲೆಗಳಲ್ಲಿ ಮಕ್ಕಳನ್ನು 6ನೇ ತರಗತಿಗ ಪ್ರವೇಶ ಪಡೆಯಲು ಕಳಿಸಿಕೊಡಬೇಕು. ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ವಸತಿ, ಪುಸ್ತಕಗಳು, ನೋಟ್ ಬುಕ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.
ಪರಿಸರ ಇಂಜಿನಿಯರ್ ಅರ್ಚನಾ ಆರಾಧ್ಯ, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾಧಿಕಾರಿ ಭಾರತಿ ಅನಂತಶಯನ, ಸಾರಂಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಲಲಿತಾ, ವಸತಿ ಶಾಲೆಯ ಪ್ರಾಂಶುಪಾಲರಾದ ಪವಿತ್ರ ಉಪಸ್ಥಿತರಿದ್ದರು.




