ಸೆಪ್ಟೆಂಬರ್ -29 ನ್ನು ಮರೆತರೆ ಮನುಷ್ಯರಾಗುತ್ತೇವೆಯೇ?

ಹಾಥರಸ್ ಮತ್ತು ಖೈರ್ಲಾಂಜಿ

ಇವು
ಭವ್ಯಭಾರತದ ಹಿತ್ತಲುಗಳು…
ಸನಾತನ ಭಾರತದ
ಅಂತರಂಗದ ಕಿಲುಬುಗಳು…

ಖೈರ್ಲಾಂಜಿ

2006ರ ಸೆಪ್ಟೆಂಬರ್ 29 ರಂದು ಸುರೇಖಾ ಭೋತ್ಮಾಂಗೇ ಕುಟುಂಬವನ್ನು ಮಹಾರಾಷ್ಟ್ರ ದ ಖೈರ್ಲಾಂಜಿಯ ಸವರ್ಣೀಯ ಸಮಾಜ ಅಮಾನುಷವಾಗಿ ಅತ್ಯಾಚಾರ ಮಾಡಿ ಬಿಸಾಡಿತ್ತು…

ಆಗ ಮಹಾರಾಷ್ಟ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ಸವರ್ಣಿಯ ಬರ್ಬರತೆಯನ್ನು ಮುಚ್ಚಿಹಾಕಲು ಸಾಕಷ್ಟು ಪ್ರಯತ್ನಿಸಿತು…

ಸುದೀರ್ಘ ಕೋರ್ಟು ಸಮರ ನಡೆದರೂ, ನಲವತ್ತು ಅಪರಾಧಿಗಳಲ್ಲಿ ಎಂಟು ಜನರಿಗೆ ಮಾತ್ರ ಜೀವಾವಧಿ ಶಿಕ್ಷೆಯಾದರೂ, ಎಲ್ಲಾ ಕೋರ್ಟುಗಳು ಇದನ್ನು ದಲಿತರ ಮೇಲೆ ನಡೆದ ಜಾತಿ ದೌರ್ಜನ್ಯವೆಂದು ಗುರುತಿಸಲು, ಮತ್ತು ಆ ಕಲಮಿನಡಿ ಶಿಕ್ಷೆ ವಿಧಿಸಲು ಕೂಡಾ ನಿರಾಕರಿಸಿದವು…

ಕೊನೆಗೆ 2019ರಲ್ಲಿ, ಸುಪ್ರೀಂ ಕೋರ್ಟಿನಲ್ಲಿರುವ ಏಕೈಕ ದಲಿತ ನ್ಯಾಯಾಧೀಶರಾದ ನ್ಯಾ. ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠವೂ ಸಹ ಖೈರ್ಲಾಂಜಿ ಪ್ರಕರಣ ದಲಿತ ದೌರ್ಜನ್ಯದ ಪ್ರಕರಣವಲ್ಲ ಎಂದು ಘೋಷಿಸಿಬಿಟ್ಟಿತು….

ಹಾಥರಸ್

2020 ರ ಸೆಪ್ಟೆಂಬರ್ 29 ರಂದು ಉತ್ತರಪ್ರದೇಶದ ಹಾಥರಸ್ ನಲ್ಲಿ ನಾಲ್ವರು ಠಾಕೂರ್ ಯುವಕರಿಂದ ಅಮಾನುಷ ಅತ್ಯಾಚಾರಕ್ಕೆ ಗುರಿಯಾಗಿದ್ದ ಮನೀಷಾ ಅಸುನೀಗಿದಳು…

ಅದನ್ನು ವರದಿ ಮಾಡುವುದೇ ದೇಶದ್ರೋಹಿ ಸಂಚು ಎಂದು ಘೋಷಿಸಿದ ಬಿಜೆಪಿ ಯ ಯೋಗಿ ನೇತೃತ್ವದ ಠಾಕೂರ್ ಸರ್ಕಾರ ಮನಿಷ ಮತ್ತು ಆಕೆಯ ಕುಟುಂಬವನ್ನೇ ದೋಷಿಯಾಗಿಸಲು ನಿರಂತರವಾಗಿ ಯತ್ನಿಸಿತು..ಎಲ್ಲಾ ಸಾಕ್ಷಗಳನ್ನು ವ್ಯವಸ್ಥಿತವಾಗಿ ನಾಶ ಮಾಡತೊಡಗಿತ್ತು..

2023ರ ಮಾರ್ಚ್ ನಲ್ಲಿ ಹಾಥರಸ್ ನ ಜಿಲ್ಲಾ ನ್ಯಾಯಾಲಯ ಆರೋಪಿಗಳ ಮೇಲಿದ್ದ ಆತ್ಯಾಚಾರ ಆರೋಪವನ್ನೇ ಕೈಬಿಟ್ಟಿತು… ನಾಲ್ಕು ಆರೋಪಿಗಳಲ್ಲಿ ಮೂವರನ್ನು ಖುಲಾಸೆ ಮಾಡಿತು.. ಒಬ್ಬನ ಮೇಲೆ ‘ಅನುದ್ಧಿಷ್ಯ ಪೂರ್ವಕವಾಗಿ ಸಾವಿಗೆ ಕಾರಣನಾದ, ಆದರೆ koleyallada’ ಸಾಧಾರಣ ಅಪರಾಧದ ಶಿಕ್ಷೆ ವಿಧಿಸಿತು…

ಭಾರತ ಬದುಕಿದೆ ಎನ್ನುವುದಾದರೆ ಈ ಅನ್ಯಾಯಗಳನ್ನು ಮರೆಯಬಾರದು…

ಸೆಂಟ್ರಲ್ ವಿಸ್ಟಾ, ಬುಲೆಟ್ ಟ್ರೈನ್, ಮೋದಿ ಜನ್ಮದಿನ, ಸ್ವಾತಂತ್ರ್ಯ, ಗಣರಾಜ್ಯ ದಿನಗಳಗಿಂತ ಹೆಚ್ಚಾಗಿ ಈ ದಿನಗಳನ್ನು ನೆನಪಿಟ್ಟುಕೊಳ್ಳದಿದ್ದರೆ
… ಭಾರತ ಸಾಯುತ್ತದೆ….

ಮನೀಷಾ ಳ ನೆನಪಲ್ಲಿ…

ಹತ್ರಸ್ ನ ಚಿತೆಯಲ್ಲಿ

ಮಗಳು ಮನೀಶಾಳ
ಸಾವಿನ ಸೂತಕವಿರದವರು
ಮನುಷ್ಯರೇ ಅಲ್ಲ..

ಹತ್ರಸ್ ನ ಚಿತೆಯ
ಬೆಂಕಿ ಸೋಕದ
ಯಾವ ಅಪ್ಪನ ಪ್ರೀತಿಯೂ
ನಿಜವಲ್ಲ

ಆಕ್ರಂದನಗಳಿಗೆ
ಕಿವುಡಾಗಿಸುವ
ಯಾವ ಭಜನೆಯೂ
ಧರ್ಮ ವಲ್ಲ

ಹಲವುಗಳ ಖೈದಿನಲ್ಲಿರಿಸೀ
ಒಂದು ಒಂದೆನ್ನುವ
ದೇಶ, ದೇಶವೇ ಅಲ್ಲ

-ಶಿವಸುಂದರ್