ರೈತರ ಪ್ರತಿಭಟನೆಗೆ ಮಣಿದು ರಾಗಿ ಖರೀದಿಗೆ ಸಜ್ಜಾದ ಬೊಮ್ಮಾಯಿ ಸರ್ಕಾರ

0
2858

ರಾಜ್ಯದಲ್ಲಿ ಪಡಿತರ ವಿತರಣೆಗೆ ಅಗತ್ಯವಿರುವ ರಾಗಿಯ ಪ್ರಮಾಣವನ್ನು ಆಧರಿಸಿ ರೈತರಿಂದ ಹೆಚ್ಚುವರಿ ರಾಗಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ರಾಗಿ ಖರೀದಿ ಕೇಂದ್ರ ತೆರೆಯುವ ಕುರಿತಾಗಿ ನಿನ್ನೆ ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ʼರಾಜ್ಯದ ಜನತೆಗೆ ಪಡಿತರ ವಿತರಿಸಲು ಅಗತ್ಯವಿರುವ ರಾಗಿಯನ್ನು ಈಗಾಗಲೇ ಖರೀದಿ ಮಾಡಲಾಗಿದೆ. ಹೆಚ್ಚುವರಿ ಪಡಿತರ ಧಾನ್ಯ ವಿತರಣೆಯನ್ನು ಕೇಂದ್ರ ಸರ್ಕಾರ ಎಂಟು ತಿಂಗಳ ಅವಧಿಗೆ ವಿಸ್ತರಿಸಿದೆ. ಹೀಗಾಗಿ ಹೆಚ್ಚುವರಿಯಾಗಿ ಎಷ್ಟು ಪ್ರಮಾಣದಲ್ಲಿ ರಾಗಿ ಬೇಕಾಗಬಹುದು ಎಂಬುದನ್ನು ಪರಿಶೀಲಿಸಿ ರೈತರಿಂದ ಬೆಳೆ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗುವುದುʼ ಎಂದು ಭರವಸೆ ನೀಡಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ʼರೈತರಿಂದ ರಾಗಿ ಖರೀದಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಬೇಕುʼ ಎಂದು ಒತ್ತಾಯಿಸಿದರು.

2021ರಲ್ಲಿ ಪ್ರವಾಹ ಹಾಗೂ ಅಕಾಲಿಕ ಮಳೆಯಿಂದ ಉಂಟಾದ ಹಾನಿಯ ಹೊರತಾಗಿಯೂ ರಾಜ್ಯದಲ್ಲಿ 7.81 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 13.06 ಲಕ್ಷ ಟನ್‌ ರಾಗಿ ಉತ್ಪಾದನೆ ಮಾಡಲಾಗಿದೆ. ದಿ ಹಿಂದೂ ವರದಿಯ ಪ್ರಕಾರ ಈ ಬಾರಿ ಅರ್ಧದಷ್ಟು ರಾಗಿ ಬೆಳೆ ಮಾತ್ರ ಮಾರುಕಟ್ಟೆಗೆ ಬಂದಿದೆ. ಉಳಿದರ್ಧವನ್ನು ರೈತರು ತಮ್ಮ ಮನೆ ಬಳಕೆಗೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೆಳೆ ಹಾನಿಯಿಂದ ತೀವ್ರ ನಷ್ಟ ಅನುಭವಿಸಿರುವ ರೈತರು, ಬೆಳೆ ಮಾರಾಟಕ್ಕೆ ಎಪಿಎಂಸಿಗಳಿಗೆ ಬಂದರೆ ಸರ್ಕಾರ ರಾಗಿ ಖರೀದಿಗೆ ಷರತ್ತು ವಿಧಿಸಿ ರೈತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಕಳೆದ ಬಾರಿ ಪಡಿತರಕ್ಕಾಗಿ ರೈತರಿಂದ 4.7 ಲಕ್ಷ ಟನ್‌ ರಾಗಿಯನ್ನು ಎಂಎಸ್‌ಪಿ ಅಡಿಯಲ್ಲಿಯೇ ಖರೀದಿ ಮಾಡಲಾಗಿತ್ತು. ಈ ಬಾರಿ ಆ ಮೊತ್ತವನ್ನು ತಗ್ಗಿಸಿ ಕೇವಲ 2.10 ಲಕ್ಷ ಟನ್‌ ರಾಗಿ ಖರೀದಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ 2.6 ಲಕ್ಷ ಟನ್‌ ರಾಗಿ ಬೆಳೆ ಖರೀದಿಗೆ ಸರ್ಕಾರ ಕತ್ತರಿ ಹಾಕಿದೆ. ಮೊದ ಮೊದಲು ರಾಗಿ ಬೆಳೆಯಲು ಉತ್ತೇಜನ ನೀಡಿ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಿದ್ದ ಸರ್ಕಾರ, ಇದೀಗ ತನ್ನನ್ನೇ ನಂಬಿಕೊಂಡು ಲಕ್ಷಾಂತರ ಟನ್‌ ರಾಗಿ ಬೆಳೆದ ರೈತರನ್ನು ನಡು ನೀರಿನಲ್ಲಿ ಕೈ ಬಿಟ್ಟಿದೆ.

ಅದರ ಜೊತೆಗೆ ರಾಗಿ ಖರೀದಿಗೆ ಹೊಸದಾಗಿ ಮಿತಿಗಳನ್ನು ಹಾಕಲಾಗಿದ್ದು, 4 ಎಕ್ಕರೆಗಿಂತ ಕಡಿಮೆ ಪ್ರದೇಶದಲ್ಲಿ ರಾಗಿ ಬೆಳೆದ ರೈತರಿಂದ ಕೇವಲ 20 ಕ್ವಿಂಟಾಲ್‌ ರಾಗಿಯನ್ನು ಮಾತ್ರ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡುವುದಾಗಿ ಘೋಷಿಸಿತ್ತು.

ಸರ್ಕಾರದ ಈ ನಡೆಯನ್ನು ಖಂಡಿಸಿ ರಾಜ್ಯದ ಹಲವೆಡೆಗಳಲ್ಲಿ ರೈತರು ಪ್ರತಿಭಟನೆಗಳನ್ನು ನಡೆಸಿದ್ದರು. ಇದೇ ವಿಚಾರವಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ನಿಯೋಗ ಕೂಡ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಎಚ್ಚೆತ್ತುಕೊಂಡಿರುವ ಸಿಎಂ ರಾಗಿ ಖರೀದಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ

LEAVE A REPLY

Please enter your comment!
Please enter your name here