ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸರಾಳು ಹೋಬಳಿಯಲ್ಲಿ ಸುಮಾರು 100 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.
ಬುಧವಾರ ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಎಸ್.ಹೆಚ್.ಡಿ.ಪಿ.ಯೋಜನೆಯಡಿಯಲ್ಲಿ 10 ಕೋಟಿ ರೂ.ವೆಚ್ಚದ ಬಸರಾಳು-ಮುತ್ತೇಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸರಾಳು ಗ್ರಾಮದಿಂದ ನಾಗಮಂಗಲ, ಹಾಸನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ 25 ವರ್ಷಗಳಿಂದ ಗುಂಡಿ ಬಿದ್ದು ಜನರು ಓಡಾಡಲು ಸಾಧ್ಯವಿಲ್ಲದಂತೆ ಆಗಿತ್ತು. ಈ ರಸ್ತೆ ನಿರ್ಮಾಣದಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಶೀಘ್ರ ರಸ್ತೆ ಕಾಮಗಾರಿ ಆರಂಭವಾಗಿ,ಅಷ್ಟೇ ಬೇಗ ಉದ್ಘಾಟನೆ ಮಾಡುತ್ತೇನೆ ಎಂದರು.
ನಾನು ಶಾಸಕನಾದ ನಂತರ ಬಸರಾಳು ಹೋಬಳಿಯಲ್ಲಿ ಸುಮಾರು 100 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಾಳೆ 7.50 ಕೋಟಿ ರೂ. ವೆಚ್ಚದ ಮಾಚಗೌಡನಹಳ್ಳಿ- ಬಾಳೇನ ಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ತೆರೆಯಲಾಗುತ್ತಿದೆ. ಬಸರಾಳು ಮೋಳೆ-ಕಂಬದಹಳ್ಳಿ ರಸ್ತೆಗೆ 4.5 ಕೋಟಿ ಹಣ ಬಿಡುಗಡೆಯಾಗಿದೆ. ಅಂಕುಶಾಪುರ ಕೋಡಿ ಹಾಗೂ ಬೆನ್ನಟ್ಟಿ ಕೆರೆಯ ಕೆಳಭಾಗದ ಅಭಿವೃದ್ಧಿಗೆ 2.50ಕೋಟಿ ಹಣ ಬಿಡುಗಡೆಯಾಗಿದೆ. ಇನ್ನೊಂದು ತಿಂಗಳಲ್ಲಿ 7.50 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ನಾನೇ ಗುದ್ದಲಿ ಪೂಜೆ ನೆರವೇರಿಸಲಿದ್ದೇನೆ. ಮುತ್ತೇಗೆರ-ನಂಜೇನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 60 ಲಕ್ಷ ಹಣ ಬಿಡುಗಡೆಯಾಗಿದೆ. ಬೆನ್ನಟ್ಟಿ-ನಾಯಕನಹಳ್ಳಿ- ವಡ್ಡರಹಳ್ಳಿ ರಸ್ತೆಗೆ ಒಂದು ಕೋಟಿ ಹಣ ಮಂಜೂರಾಗಿದ್ದು, ಗುತ್ತಿಗೆದಾರ ರವಿ ಬೋಜೇಗೌಡ ಅವರಿಂದ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.

ಶೀಘ್ರ ಆರಂಭ ಕೆಲಸ ಪ್ರಾರಂಭ
ಗಣಿಗ ಮುಖ್ಯ ರಸ್ತೆಗೆ ಒಂದು ಕೋಟಿ ಹಣ ಬಿಡುಗಡೆಯಾಗಿದ್ದು, ಗುಡಿಗೇನಹಳ್ಳಿ ಗ್ರಾಮದ ಮುಖ್ಯ ರಸ್ತೆಗೆ ಒಂದು ಕೋಟಿ,ಹುಲ್ಲಳ್ಳಿ- ನಾಯಕನಹಳ್ಳಿ ರಸ್ತೆಗೆ ಒಂದು ಕೋಟಿ ಮಂಜೂರಾಗಿದ್ದು ಶೀಘ್ರ ಈ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಿದ್ದೇನೆ. ಬಸರಾಳು ಬಸ್ ಸ್ಟ್ಯಾಂಡ್ ಕಾಮಗಾರಿಗೆ ಗುತ್ತಿಗೆದಾರ 25 ಲಕ್ಷ ಹಣ ಕಡಿಮೆ ನಮೂದಿಸಿ ಟೆಂಡರ್ ಪಡೆದಿದ್ದರು. 25 ಲಕ್ಷದಷ್ಟು ಹಣ ಕಡಿಮೆಯಾದರೆ ಅಭಿವೃದ್ಧಿ ಕೆಲಸ ಆಗುವುದಿಲ್ಲ ಎಂದು ಹೇಳಿ ಮತ್ತೆ ಹೊಸದಾಗಿ ಟೆಂಡರ್ ಮಾಡಿಸಿದ್ದೇನೆ. ಇದರ ಕೆಲಸ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.
ಎರಡು ಕೋಟಿ ವೆಚ್ಚದ ಕೃಷಿಭವನ ಮುಕ್ತಾಯ ಹಂತದಲ್ಲಿದ್ದು ಶೀಘ್ರ ಉದ್ಘಾಟನೆಗೊಳ್ಳಲಿದೆ. 25 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣವಾಗಿದ್ದು,ತಾಲ್ಲೂಕು ಪಂಚಾಯತಿ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.ಕೋಡಿ ಕೊಪ್ಪಲು-ಬಸರಾಳು ಮಾರ್ಗದ ರಸ್ತೆ ಕಾಮಗಾರಿಗೆ ಎರಡು ಕೋಟಿ ಟೆಂಡರ್ ಆಗಿದೆ. 13 ಕೋಟಿ ವೆಚ್ಚದಲ್ಲಿ ಹಲ್ಲೇಗೆರೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬರುವ ಹಿನ್ನೆಲೆಯಲ್ಲಿ 20 ಕೋಟಿ ರಸ್ತೆ ಕಾಮಗಾರಿಗೆ ಪೂಜೆ ಮಾಡಲಾಗಿದೆ. ಬಸರಾಳು ಹೋಬಳಿಯ ಇತಿಹಾಸದಲ್ಲಿಯೇ ನೂರು ಕೋಟಿ ಕಾಮಗಾರಿ ನಡೆಯುತ್ತಿರುವುದು ಇದೇ ಮೊದಲು ಎಂದರು.
ಚಿಕ್ಕಮಂಡ್ಯದಿಂದ ಬಿಳಿದೇಗಲು ಗ್ರಾಮದವರೆಗಿನ ರಸ್ತೆ ಸಾಕಷ್ಟು ಹಾಳಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರ ರವಿ ಬೋಜೇಗೌಡ ಅವರಿಗೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಸಿಕ್ಕಿದ್ದು ಶೀಘ್ರ ಭೂಮಿ ಪೂಜೆ ಮಾಡುವುದಾಗಿ ತಿಳಿಸಿದರು.
ಕಾವೇರಿ ನೀರಾವರಿ ನಿಗಮದಿಂದ 100 ಕೋಟಿ ಕಾಮಗಾರಿ ಮೊತ್ತ ಬಿಡುಗಡೆಯಾಗಿದೆ.ಇದರಲ್ಲಿ 93 ಕೋಟಿ ರೂ.ಗಳ ಒಂದು ಪ್ಯಾಕೇಜ್,7 ಕೋಟಿ ರೂ.ಗಳ ಮತ್ತೊಂದು ಪ್ಯಾಕೇಜ್ ಮಾಡಲಾಗಿದೆ.ನಾಳೆ 7 ಕೋಟಿ.ರೂ.ಗಳ ಟೆಂಡರ್ ತೆರೆಯಲಾಗುವುದು.93 ಕೋಟಿಯ ಪ್ರಾಕೇಜ್ ನಲ್ಲಿ ಸುಮಾರು 23 ಅಭಿವೃದ್ಧಿ ಕೆಲಸಗಳು ನಡೆಯಲಿದ್ದು,ಇದರಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುವುದು. ಮಂಡ್ಯ ತಾಲೂಕಿನ ಕೋಣನಹಳ್ಳಿ, ಬೂದನೂರು ಕೆರೆಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ತಾಲೂಕು ಕೇಂದ್ರವಾಗಿ ಬಸರಾಳು
ಬಸರಾಳು ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಕೋಟಿ ಕಾಮಗಾರಿಗಳು ನಡೆಯುತ್ತಿದ್ದು, ಜನತೆಯ ಆಶೀರ್ವಾದದಿಂದ ಬಸರಾಳನ್ನು ಮಂಡ್ಯ ಗ್ರಾಮಾಂತರ ತಾಲೂಕು ಕೇಂದ್ರವಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಬಸರಾಳು, ದುದ್ದ, ಕೆರಗೋಡು ಹೋಬಳಿಯನ್ನು ಸೇರಿಸಿ ಬಸರಾಳು ತಾಲೂಕು ಕೇಂದ್ರ ಮಾಡಲು ಚಾಲನೆ ನೀಡಿದ್ದೇನೆ. 4.50 ಲಕ್ಷ ಜನರಿಗೆ ಒಬ್ಬ ತಹಶೀಲ್ದಾರ್ ಇದ್ದು, ಇದರಿಂದ ಈ ಭಾಗದ ಜನರ ಕೆಲಸ ಕಾರ್ಯಗಳು ಕಷ್ಟವಾಗಿದೆ. ಅಧಿಕಾರ ವಿಕೇಂದ್ರಿಕರಣದ ಭಾಗವಾಗಿ ಬಸರಾಳನ್ನು ತಾಲೂಕು ಕೇಂದ್ರವಾಗಿ ಮಾಡಿದರೆ ಜನರಿಗೆ ಅನುಕೂಲವಾಗಲಿದೆ ನನ್ನ ಶಾಸಕತ್ವದ ಅವಧಿಯಲ್ಲಿಯೇ ತಾಲೂಕು ಕೇಂದ್ರ ಮಾಡುವುದು ನನ್ನ ಉದ್ದೇಶ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಬೆಂಬಲ ಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರಥಮ ದರ್ಜೆ ಗುತ್ತಿಗೆದಾರ ರವಿ ಬೋಜೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರಯ್ಯ, ಕಾಂಗ್ರೆಸ್ ಮುಖಂಡರುಗಳಾದ ರವಿ ಶಂಕರ್, ರಾಜು,ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




