ಮಂಡ್ಯದಲ್ಲಿ ನಡೆಯುತ್ತಿರುವ ಐಪಿಎಲ್ ಬೆಟ್ಟಿಂಗ್, ಜೂಜು, ಹುಕ್ಕಾ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆ ಸೇರಿದಂತೆ ಕಾನೂನು ಬಾಹಿರ ಘಟನೆಗಳ ವಿರುದ್ದ 15 ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು, ಜೂಜು ದಂಧೆಗಳ ಬಗ್ಗೆ ಸಾಮಾನ್ಯವಾಗಿ ತಿಳಿಸಿದರೆ ಸಾಲದು, ನಿರ್ಧಿಷ್ಟವಾಗಿ ಇಂತಹ ಕಡೆಗಳಲ್ಲಿ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೋನ್ ಪೇ, ಗೂಗಲ್ ಪೇ ಸೇರಿದಂತೆ ಮುಂತಾದ ಹಣದ ವ್ಯವಹಾರ ನಡೆಯುವ ಆಪ್ ಗಳ ವಹಿವಾಟುಗಳನ್ನು ಪರಿಶೀಲಿಸಿ ಬೆಟ್ಟಿಂಗ್ ದಂಧೆಕೋರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಟ್ಟಿಂಗ್ ದಂಧೆಗೆ ಪ್ರೇರೆಪಿಸುತ್ತಿದ್ದ ನಾಗೇಂದ್ರ ಎಂಬುವನ ವಿರುದ್ದ ಕಳೆದ 4 ತಿಂಗಳ ಹಿಂದೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಾನು ದೂರು ದಾಖಲಿಸಿದ್ದೆ, ಆದರೆ ಪೊಲೀಸರು ಎಫ್ಐಆರ್ ದಾಖಲು ಮಾಡದೇ, ಕೇವಲ ಎನ್.ಸಿ.ಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಆನಂತರ ನಡೆದ ಬೆಳವಣಿಗೆಯಲ್ಲಿ ದಂಧೆಯಲ್ಲಿ ಶಾಮೀಲಾಗಿದ್ದ ನಾಗೇಂದ್ರ ತಮ್ಮ ಮಗ ಪ್ರೀತಂ ಮೇಲೆ ಚೆಕ್ ಬೌನ್ಸ್ ಕೇಸನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ, ಪ್ರೀತಂ ಬಳಿ ಇರುವ ಮೊಬೈಲನ್ನು ವಶಕ್ಕೆ ಪಡೆದು ಹಣದ ವಹಿವಾಟನ್ನು ಪರಿಶೀಲಿಸಿ ಮೇಲೆ ನಾಗೇಂದ್ರನ ಮೇಲೆ ಇಂದು ಎಫ್ಐಆರ್ ದಾಖಲಾಗುವುದು ಎಂದರು.
ಈ ಬಗ್ಗೆ ನುಡಿಕರ್ನಾಟಕ.ಕಾಂ ಪರಿಶೀಲನೆ ನಡೆಸಿದಾಗ ನಾಗೇಂದ್ರನ ಮೇಲೆ ಎಫ್ಐಆರ್ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಹಿನ್ನೆಲೆಯಲ್ಲಿ ಮಧು ಮತ್ತು ಅಭಿಷೇಕ್ ವಿರುದ್ದ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ದೋಷಾರೋಪ ಪಟ್ಟಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಮಧು ಎಂಬುವನ ಹೆಸರನ್ನು ಕೈಬಿಡಲಾಗಿತ್ತು ಎಂದು ವಕೀಲ ಕಿಶೋರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದರು, ನಂತರ ವಕೀಲರು, ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಹೇಗೆ ವಿಚಾರಣೆ ನಡೆಸುತ್ತೀರಿ ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಎಸ್ಪಿ, ಹೆಚ್ಚುವರಿ ದೋಷಾರೋಪಣ ಪಟ್ಟಿ ತಯಾರಿಸಲು ಅವಕಾಶವಿದೆ, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಾಲ ಕೊಟ್ಟು ದಂಧೆಗೆ ಕುಮ್ಮಕ್ಕು
ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆ ಮಾಡುವವರು ತಾವೇ ಬಡ್ಡಿಗೆ ಹಣವನ್ನು ನೀಡಿ, ಬಲಿಪಶುಗಳಿಂದ ಖಾಲಿ ಚೆಕ್ ಗಳನ್ನು ಪಡೆದು ಕೊಂಡು, ಮುಂದಿನ ದಿನಗಳಲ್ಲಿ ವೈಮನಸ್ಸು ಉಂಟಾದಾಗ, ಇದು ಬೆಟ್ಟಿಂಗ್ ದಂಧೆಯಲ್ಲ, ಹಣದ ವ್ಯವಹಾರ ಎಂದು ಪ್ರಕರಣವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕುಮಾರ ತಿಳಿಸಿದರು.
ಸಭೆಯಲ್ಲಿ ಅಲ್ ಇಂಡಿಯ ಲಾಯರ್ಸ್ ಯುನಿಯನ್ ಅಧ್ಯಕ್ಷ ಬಿ.ಟಿ.ವಿಶ್ವನಾಥ್, ಕಿಶೋರ್, ಸಚಿನ್, ಕರುನಾಡು ಸೇವಕರು ಸಂಘಟನೆ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಚಂದ್ರು, ಸಿಐಟಿಯು ಸಿ.ಕುಮಾರಿ, ಬೂದನೂರು ಸತೀಶ್, ಕರವೇ ಹೆಚ್.ಡಿ.ಜಯರಾಂ, ವೇಣುಗೋಪಾಲ್ ಸೇರಿದಂತೆ ಬೂದನೂರು ಗ್ರಾಮಸ್ಥರು ಭಾಗವಹಿಸಿದ್ದರು.




