ಪಾಂಡವಪುರ ತಾಲ್ಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಡಿಂಕಾ ಶೆಟ್ಟಿಹಳ್ಳಿ ಗ್ರಾಮದಲ್ಲಿ 11 ವರ್ಷ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಅಪರಾಧಿಗೆ ಮಂಡ್ಯದ 1ನೇ ತ್ವರಿತಗತಿ ನ್ಯಾಯಾಲಯವು 15 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಪಾಂಡವಪುರ ಗ್ರಾಮದ ಡಿಂಕಾ ಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ಬಿನ್ ರಂಗೇಗೌಡ (40 ವರ್ಷ) ಶಿಕ್ಷೆಗೆ ಗುರಿಯಾದವನು.
ಘಟನೆಯ ವಿವರ
ಕಳೆದ ಅಕ್ಟೋಬರ್ 15, 2022 ರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮಂಜುನಾಥ ಅದೇ ಗ್ರಾಮದ ಪಕ್ಕದ ಮನೆಯ ವಾಸಿ 11 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ, ತಾನು ವಿವಸ್ತ್ರನಾಗಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ.
ಈ ಬಗ್ಗೆ ಕೆ.ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ಮೊನಂ. 199/2022 ಕಲಂ 363, 366, 342, 448, 506, 354 (2), 376 (20), 511 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖಾಧಿಕಾರಿ ಕೆ.ಆರ್.ಸಾಗರ ವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಪುನೀತ್ ಟಿ.ಎಂ ಅವರು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿಕೊಂಡು ಸಾಕ್ಷಿಯನ್ನು ಕಲೆ ಹಾಕಿ ಆರೋಪಿಯ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಮಂಡ್ಯದ 1 ನೇ ತ್ವರಿತಗತಿ ನ್ಯಾಯಾಲಯ ವಿಚಾರಣೆ ನಡೆದು, ಈ ತೀರ್ಪು ಹೊರಬಿದ್ದಿದೆ, ಸರ್ಕಾರಿ ಅಭಿಯೋಜಕರಾದ ಪೂರ್ಣಿಮಾ ಸಂತ್ರಸ್ಥೆ ಪರ ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ನ್ಯಾಯಾಧೀಶರಾದ ಶಬಾನ ಬೇಗಂ ಎಲ್ ಲಡಕನ್ ಜ.31ರಂದು, 15 ವರ್ಷ ಶಿಕ್ಷೆಯನ್ನು ಪ್ರಕಟಿಸಿದ್ದು, ಅಪರಾಧಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಲು ಶ್ರಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಪುನಿತ್ ಟಿ.ಎಂ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಂಗರಾಜು, ಸಿಬ್ಬಂದಿಗಳಾದ ಕೆ.ಆರ್.ಸತೀಶ್, ಶ್ರೀಧರ್, ರವೀಶ್, ಶೋಭ, ಯಧುರಾಜ್, ಸುನಿಲ್ ಕುಮಾರ್ ಹಾಗು ರೇಣುಕುಮಾರ್ ಅವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸಿಸಿದ್ದಾರೆ.




