ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ಬುಧವಾರ ತಿಳಿಸಿದೆ.
ದೇಶದಲ್ಲಿ ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್ ಸಂಖ್ಯೆ ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅದು ಹೇಳಿದೆ.
ಆಹಾರ ಭದ್ರತೆ ಹಿನ್ನಲೆಯಲ್ಲಿ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ’ಯನ್ನು ಅನುಷ್ಠಾನಗೊಳಿಸಿದೆ.
ಇ–ಪಿಒಎಸ್
ದೇಶದಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಇ–ಪಿಒಎಸ್ (ಪಾಯಿಂಟ್ ಆಫ್ ಸೇಲ್) ಸಾಧನಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಪಡಿತರ ವಿತರಣೆ ವೇಳೆ ಆಧಾರ ಸಂಖ್ಯೆಯನ್ನು ದೃಢೀಕರಿಸಲಾಗುತ್ತದೆ. ಅರ್ಹ ಪಡಿತರ ಚೀಟಿದಾರರಿಗೆ ಮಾತ್ರ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.
ಅನರ್ಹ ಪಡಿತರ ಚೀಟಿ ಗುರುತಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲನೆ: ಆಹಾರ ಇಲಾಖೆ
ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್ಗಳು, 1,14,60,137 ಬಿಪಿಎಲ್ ಕಾರ್ಡ್ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಒಟ್ಟು ಬಿಪಿಎಲ್ ಕಾರ್ಡ್ಗಳ ಪೈಕಿ 13,87,652 ಕಾರ್ಡ್ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್ಗಳಾಗಿವೆ. 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್ಗಳ ಸಂಖ್ಯೆ 2,75,667.
ಅಲ್ಲದೆ, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್ನಿಂದ ತೆಗೆದುಹಾಕಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಅಮಾನತು, ರದ್ದು ಮತ್ತು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್ಗಳ ಸಂಖ್ಯೆ 3,81,983. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: ಮುನಿಯಪ್ಪ
ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತದೆ ಎಂಬುದಾಗಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಅಷ್ಟೆ. ಸರ್ಕಾರ ಎಲ್ಲೂ ಹೇಳಿಲ್ಲ. ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ರದ್ದಾಗುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ಶೇ 50ರಷ್ಟು ಬಿಪಿಎಲ್ ಪಡಿತರ ಚೀಟಿಗಳು ಇಲ್ಲ. ಕರ್ನಾಟಕವು ಆರ್ಥಿಕವಾಗಿ ಸುಭದ್ರವಾಗಿ ಇರುವ ರಾಜ್ಯವಾಗಿದ್ದು, ತೆರಿಗೆ ಪಾವತಿಸುವುದರಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದೆ. ಹೀಗಿದ್ದರೂ ಶೇ 75 ರಿಂದ 80 ರಷ್ಟು ಬಿಪಿಎಲ್ ಚೀಟಿಗಳು ಇರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಈ ಸರ್ಕಾರದಲ್ಲಿ ಮಾತ್ರವಲ್ಲ; ಸುಮಾರು 10 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಅಲ್ಲದೇ; ಬಿಜೆಪಿ ಹಾಗೂ ಮೈತ್ರಿ ಸರ್ಕಾರದಲ್ಲಿಯೂ ಚರ್ಚೆಗಳಾಗಿವೆ. ಹೀಗಾಗಿ, ಬಿಪಿಎಲ್ಗೆ ಅರ್ಹರಲ್ಲದವರನ್ನು ಎಪಿಎಲ್ಗೆ ಬದಲಾಯಿಸಲಾಗುತ್ತದೆ ಹೇಳಿದರು.
ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಿ ಹೋಗಬಾರದು
ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್ಗೆ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಅನರ್ಹರನ್ನು ಗುರುತಿಸಿ ಬಿಪಿಎಲ್ನಿಂದ ಎಪಿಎಲ್ಗೆ ಇಡಲಾಗುತ್ತದೆಯೇ ಹೊರತು ರದ್ದು ಮಾಡಲ್ಲ. ಗುರುವಾರ ಅಂಕಿಅಂಶ ಸಮೇತ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದರು.




