ತಮಿಳುನಾಡಿಗೆ ನಿರಂತರ ನೀರು ಹರಿಸುವಂತೆ ಮತ್ತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕರ್ನಾಟಕದ ಹಿತ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರ – ರಾಜ್ಯ ಸರ್ಕಾರದ ನಡೆ ಖಂಡಿಸಿ ವಿದ್ಯಾರ್ಥಿ ಶಕ್ತಿ ಮಂಡ್ಯನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಮಂಡ್ಯನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಕಳೆದ ಎರಡು ದಿನದಿಂದ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗುತ್ತಿದ್ದು, 60ನೇ ದಿನದ ಇಂದಿನ ಹೋರಾಟದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗಿಯಾಗಿ ಹೋರಾಟ ಮುಂದುವರಿಸಿದರು.
ಜಿಲ್ಲಾ ರೈತ ಹಿತರಕ್ಷಣ ಸಮಿತಿ ಮುಖಂಡರ ಜೊತೆಗೂಡಿದ ವಿದ್ಯಾರ್ಥಿಗಳು, ರಸ್ತೆತಡೆ ನಡೆಸಿ ಕನ್ನಡ ಬೆಳೆಸಿ- ಕಾವೇರಿ ಉಳಿಸಿ ಎಂಬ ಘೋಷಣೆ ಕೂಗಿದರು.

ವಿದ್ಯಾರ್ಥಿ ಮೋಹನ್ ಮಾತನಾಡಿ, ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದರೂ ಸಹ ರಾಜಕಾರಣಿಗಳು ತಲೆ ಕೆಡಿಸಿಕೊಂಡಿಲ್ಲ, ಕಾವೇರಿ ನದಿ ನೀರು ಉಳಿವಿಗಾಗಿ ಹೋರಾಟ ಮಾಡುತ್ತಿಲ್ಲ, ಆದರೆ ರಾಹುಲ್ ಗಾಂಧಿ, ನರೇಂದ್ರ ಮೋದಿ, ಜೆಡಿಎಸ್ ವರಿಷ್ಠರನ್ನು ಟೀಕಿಸಿದರೆ ತಕ್ಷಣ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಳಿದು ಹೋರಾಟ ಮಾಡುತ್ತಾರೆ ಎಂದು ಕಿಡಿಕಾರಿದರು.
ವಿದ್ಯಾರ್ಥಿನಿ ಕೀರ್ತನಾ ಮಾತನಾಡಿ, ಕಾವೇರಿ ಹೋರಾಟ ಕಳೆದ 60 ದಿನದಿಂದ ನಡೆಯುತ್ತಿದೆ, ಆದರೆ ಹೋರಾಟದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಸಿಗುತ್ತಿಲ್ಲ, ಹುಲಿ ಉಗುರು ವಿಚಾರ ದೊಡ್ಡದಾಗಿದೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದರೂ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಿಲ್ಲ, ಕಾವೇರಿ ಹೋರಾಟಕ್ಕೆ ಯುವ ಜನರನ್ನ ಪ್ರೇರಪಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಕಾವೇರಿ ಹೋರಾಟದ ಬಗ್ಗೆ ಪ್ರಚುರ ಪಡಿಸಿ ಆಳುವ ಸರ್ಕಾರವನ್ನು ಪ್ರಶ್ನಿಸಿ ಕಾವೇರಿ ಉಳಿವಿಗಾಗಿ ಎಲ್ಲರೂ ಕೈಜೋಡಿಸೋಣ ಎಂದರು.
ವಿದ್ಯಾರ್ಥಿಗಳಾದ ಕೆ.ಎಂ ರೇವಣ್ಣ, ಪ್ರಶಾಂತ್ ಹಾಗೂ ತನು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ರೈತ ಸಂಘದ ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಬಿಜೆಪಿ ಮುಖಂಡ ಸಿ.ಟಿ ಮಂಜುನಾಥ್, ನಾರಾಯಣ್ ನೇತೃತ್ವ ವಹಿಸಿದ್ದರು.




