ಬೆಂಗಳೂರಿಗೆ ೬ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗೆ ಮಾರಕ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸುನಂದಾ ಜಯರಾಂ ಕಳವಳ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕುಡಿಯುವ ನೀರಿನ ಯೋಜನೆಗೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ನೀರು ಪೂರೈಕೆ ಮಾಡುವುದನ್ನು ವಿರೋಧ ಮಾಡುತ್ತಿದ್ದರೂ ಸರಕಾರಗಳು ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿವೆ. ಡ್ಯಾಂನ ನಿರ್ಮಾಣ ಕೃಷಿ ಉದ್ದೇಶಕ್ಕಾಗಿ ಎಂಬುದು ತಿಳಿದಿದ್ದರೂ ಸರಕಾರಗಳು ಮಂಡ್ಯ ಕೃಷಿಯನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ೫ ಹಂತದಲ್ಲಿ ಬೆಂಗಳೂರಿಗೆ ನೀರು ಕೊಂಡೊಯ್ಯಲಾಗಿದೆ. ಇದೀಗ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ನೀರು ಕೊಡಲು ೬ನೇ ಹಂತದಲ್ಲಿ ಯೋಜನೆ ರೂಪಿಸಿ ಅನುಮೋದನೆ ಪಡೆಯಲಾಗಿದೆ. ಇದರಿಂದ ಕೆಆರ್ಎಸ್ ಅಚ್ಚುಕಟ್ಟು ಪ್ರದೇಶಗಳಲ್ಲಿ ೨ನೇ ಬೆಳೆಗೆ ನೀರಿನ ಲಭ್ಯತೆ ಇಲ್ಲವಾಗುತ್ತದೆ. ಅಲ್ಲದೇ ಕೊನೆಯ ಭಾಗದ ಮಳವಳ್ಳಿ, ಮದ್ದೂರು, ನಾಗಮಂಗಲ ಭಾಗಗಳಲ್ಲಿ ಕೃಷಿ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಕೃಷಿ ಗ್ರಾಮಗಳನ್ನು ನಗರೀಕರಣ ಮಾಡಲು ಸರಕಾರ ಯೋಜನೆ ಮಾಡುತ್ತಿದೆ. ಕೃಷಿ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಲಾಭಿಗಳು ಸವಾರಿ ಮಾಡಲು ಹವಣಿಸುತ್ತಿದ್ದು, ಲಕ್ಷ ಕೋಟಿಗಳನ್ನು ಹೂಡಲು ಮುಂದಾಗಿವೆ. ಅವರಿಗೆ ಅನುಕೂಲ ಮಾಡಲು ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಅಣೆಕಟ್ಟೆ ಬಳಿ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಗೆ ಮುಂದಾಗಿದೆ. ಇದನ್ನು ತಡೆಯಲು ಜಿಲ್ಲೆಯ ಎಲ್ಲ ನೀರು ಬಳಕೆದಾರರು ಹಾಗೂ ಕೃಷಿಕರು ದನಿ ಎತ್ತಬೇಕಿದೆ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಹಿರಿಯ ಉಪಾಧ್ಯಕ್ಷ ಕೆ.ಬೋರಯ್ಯ, ಉಪಾಧ್ಯಕ್ಷರಾದ ಕೆಂಪೇಗೌಡ, ಇಂಡುವಾಳು ಚಂದ್ರಶೇಖರ್, ಖಜಾಂಚಿ ಮುದ್ದೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ್, ಎಸ್.ನಾರಾಯಣ್, ಇದ್ದರು.




