ಯೂರಿಯಾ ರಸಗೊಬ್ಬರದ ಅಕ್ರಮ ದಾಸ್ತಾನು ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಒಟ್ಟು 06 ಪ್ರಕರಣಗಳು ವರದಿಯಾಗಿದ್ದು ರೂ. 5.46 ಲಕ್ಷ ಮೌಲ್ಯದ 92.53 ಮೆ.ಟನ್ ಯೂರಿಯಾ ರಸಗೊಬ್ಬರವನ್ನು ಜಫ್ತಿ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶಾಸಕ ಮಧು ಜಿ.ಮಾದೇಗೌಡ ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 2 ಪ್ರಕರಣಗಳು ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿರುತ್ತದೆ ಎಂದು ವಿವರಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಿಸಿದ ಒಟ್ಟು 21 ಪ್ರಕರಣಗಳಲ್ಲಿ ರೂ. 27.34 ಲಕ್ಷ ಮೌಲ್ಯದ 462.66 ಮೆ.ಟನ್ ಯೂರಿಯಾ ರಸಗೊಬ್ಬರವನ್ನು ಜಫ್ತು ಮಾಡಲಾಗಿದೆ ಎಂದಿದ್ದಾರೆ.
ಅಕ್ರಮ ತಡೆಗೆ ಜಾರಿದಳ
ಸಹಾಯಧನದ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಯಲು ಮತ್ತು ರಸಗೊಬ್ಬರ (ನಿಯಂತ್ರಣ) ಆದೇಶ 1985ರ ಉಲ್ಲಂಘನೆ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ರಸಗೊಬ್ಬರ ಪರಿವೀಕ್ಷಕರನ್ನು ಅಧಿಸೂಚಿಸಲಾಗಿರುತ್ತದೆ. ಅಪರ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತಕೋಶ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ.
ಕಳಪೆ ಬಿತ್ತನೆ ಬೀಜ, ಗೊಬ್ಬರ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ 116 ದೂರುಗಳು ಹಾಗೂ ಕಳಪೆ ರಸಗೊಬ್ಬರ ಮಾರಾಟ ಸಂಬಂಧಿಸಿದಂತೆ 73 ದೂರುಗಳು ಸ್ವೀಕೃತವಾಗಿವೆ. ಕಳಪೆ ಬಿತ್ತನೆ ಬೀಜ ಸಂಬಂಧ 16 ಪ್ರಕರಣಗಳಲ್ಲಿ 105.41 ಕ್ವಿಂಟಾಲ್ ಹಾಗೂ ಕಳಪೆ/ನಕಲಿ ರಸಗೊಬ್ಬರ ಮಾರಾಟ ಸಂಬಂಧ 13 ಪ್ರಕರಣಗಳಲ್ಲಿ 63.55 ಮೆ.ಟನ್ ವಿವಿಧ ಗ್ರೇಡ್ ಕಳಪೆ/ನಕಲಿ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದ್ದು ತಪ್ಪಿತಸ್ಥರ ವಿರುದ್ಧ ಆಯಾಯ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಲಿಂಕ್ ಮಾಡಿ ಮಾರಾಟ ಮಾಡುವಂತಿಲ್ಲ
ರಸಗೊಬ್ಬರದ ಮಾರಾಟಗಾರರು ರಿಯಾಯಿತಿ ದರದ ರಸಗೊಬ್ಬರದ ಜೊತೆಗೆ ಇತರೆ ಯಾವುದೇ ರಸಗೊಬ್ಬರಗಳು/ ಕೃಷಿ ಪರಿಕರಗಳನ್ನು ಲಿಂಕ್ ಮಾಡಿ ರೈತರಿಗೆ ಮಾರಾಟ ಮಾಡುವಂತಿಲ್ಲ. ಈ ಸಂಬಂಧ ಪ್ರಕರಣಗಳು ಕಂಡುಬಂದಲ್ಲಿ ಮಾರಾಟಗಾರರ ವಿರುದ್ಧ ರಸಗೊಬ್ಬರ (ನಿಯಂತ್ರಣ) ಆದೇಶ 1985ರನ್ವಯ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.




