ರಾಮಾನುಜಚಾರ್ಯರ ಪ್ರೇರಕ ಶಕ್ತಿಯೇ ಶ್ರೀಮಠದಲ್ಲಿ ಅಭಿವೃದ್ಧಿ ಕೆಲಸಗಳು ಸಾಕಾರಗೊಳ್ಳಲು ಪ್ರೇರಣೆ ಎಂದು ಶ್ರೀ ಯದುಗಿರಿ ಯತಿರಾಜ ನಾರಾಯಣ ಜಿಯರ್ ಸ್ವಾಮೀಜಿ ಹೇಳಿದರು.
ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ಗ್ರಾಮದಲ್ಲಿ ತೊಂಡನೂರು ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮಾತನಾಡಿದ ಅವರು, ಮಠದ ಇನ್ನಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾನು ಕೂಡ ಈ ಮಠದ ಭಕ್ತನಾಗಿ ಜಿಯರ್ ಸ್ವಾಮಿಜಿಯವರು ಕೈಕೊಳ್ಳುವ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸುತ್ತೇನೆ ಎಂದರು.
ಕೆರೆತೊಣ್ಣೂರಿನಲ್ಲಿ ಯದುಗಿರಿ ಯತಿರಾಜ ಮಠ ಮತ್ತು ಶ್ರೀ ರಾಮಾನುಜ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ಪರಿಸರವಾದಿ ರೇವತಿ ಕಾಮತ್ ಅವರು ಕಟ್ಟಿಸಿ ಕೊಟ್ಟಿರುವ ನೂತನ ದೇಶಿ ಹಸುಗಳ `ಬಲರಾಮ ಗೋಶಾಲೆ’ಯನ್ನು ಉದ್ಘಾಟನೆ ಮಾಡಲಾಯಿತು.
ಡಾ.ಸಿ.ಎಸ್.ಊರ್ಮಿಳ ಅವರ `ತೊಂಡನೂರು ಕ್ಷೇತ್ರ ಪರಿಚಯ’ ಕೃತಿ ಲೋಕಾರ್ಪಣೆ ಮಾಡಲಾಯಿತು.
ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು, ಕಬಡ್ಡಿ ಸ್ಪರ್ಧೆಯಲ್ಲಿ ಟಿ.ಎಸ್.ಛತ್ರ ಪ್ರೌಢಶಾಲೆ ಪ್ರಥಮ ಸ್ಥಾನ, ಮೊರಾರ್ಜಿ ಪ್ರೌಢಶಾಲೆ ದ್ವಿತೀಯ ಸ್ಥಾನ, ಥ್ರೋ ಬಾಲ್ ಸ್ಪರ್ಧೆಯಲ್ಲಿ ಮೊರಾರ್ಜಿ ಪ್ರೌಢಶಾಲೆ ಪ್ರಥಮ ಸ್ಥಾನ, ಲಕ್ಷ್ಮಿಸಾಗರ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದವು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಮೆಡಲ್‌ಗಳನ್ನು ವಿತರಿಸಲಾಯಿತು. ಹಿರಿಯರಿಗೆ ಬ್ಲಾಂಕೆಟ್‌ಗಳನ್ನು ವಿತರಿಸಿ, ಕ್ರೀಡಾ ಪರಿಕರಗಳನ್ನು ನೀಡಲಾಯಿತು.
ಸಮಾರಂಭದಲ್ಲಿ ಮಠದ ಶ್ರೀರಂಗರಾಜನ್, ಶ್ರೀವತ್ಸ, ಶ್ರೀರಾಮ್ ಸುರೇಶ್, ಕಲ್ಯಾಣ್ ಸಂಪತ್, ಬೀನಾ ಸುರೇಶ್ ಭಗವಾನ್, ಡಾ.ಜಯಪ್ರಕಾಶ್ ನಾರಾಯಣ್, ಸುಜೇಂದ್ರ, ಎಂ.ರಾಜೀವ್, ಅನಿತಾ, ಭಾಮಾ ಹಾಗೂ ರಾಮೇಗೌಡ ಉಪಸ್ಥಿತರಿದ್ದರು.




