ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ಮೇಲು ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಕುರಿ-ಮೇಕೆಗಳೊಂದಿಗೆ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸೋಮನಹಳ್ಳಿ ಬಳಿ ಗ್ರಾಮಸ್ಥರ ಜೊತೆ ಸೇರಿ ರಾಷ್ಟ್ರೀಯ ಹೆದ್ದಾರಿ ತಡೆದ ವಾಟಾಳ್ ನಾಗರಾಜ್, ದಿಲೀಪ್ ಬಿಲ್ಡ್ಕಾನ್ ಸಂಸ್ಥೆ ಮಾಡುತ್ತಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇವರು ಮಾಡಿರುವ ರಸ್ತೆ ಗುಣಮಟ್ಟದಿಂದ ಕೂಡಿಲ್ಲ.ಮಳೆ ಬಂದಾಗ ಈ ರಸ್ತೆಯ ಯೋಗ್ಯತೆ ಗೊತ್ತಾಗಿದೆ. ಅಲ್ಲದೆ ರಸ್ತೆ ಅಪಘಾತವಾಗಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಕೂಡಲೇ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸೋಮನಹಳ್ಳಿ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಅವರಿಗೆ ರಸ್ತೆ ದಾಟಲು ತುಂಬಾ ತೊಂದರೆಯಾಗಿದೆ. ಕೂಡಲೇ ಇಲ್ಲೊಂದು ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಸರ್ಕಾರಕ್ಕೆ ಒಂದು ತಿಂಗಳ ಗಡುವು ಕೊಡ್ತೇನೆ. ಅಷ್ಟರೊಳಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ತಪ್ಪಿದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಯುವ ನಾಯಕ ಅಪ್ಪು ಪಿ.ಗೌಡ ಸೇರಿದಂತೆ ಅವರ ಸ್ನೇಹ ಬಳಗ ವಾಟಾಳ್ ನಾಗರಾಜ್ ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿತು.
ಪ್ರಯಾಣಿಕರ ಪರದಾಟ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆದದ್ದರಿಂದ ವಾಹನ ಸವಾರರು ಕೆಲಹೊತ್ತು ಪರದಾಡ ಬೇಕಾಯಿತು.
ತುರ್ತಾಗಿ ಮಂಡ್ಯ, ಕೊಳ್ಳೇಗಾಲ,ಮೈಸೂರು ಕಡೆಗೆ ಹೊರಟಿದ್ದ ಪ್ರಯಾಣಿಕರು ಒಂದು ಗಂಟೆಗೂ ಅಧಿಕವಾಗಿ ರಸ್ತೆಯಲ್ಲಿ ವಾಹನಗಳಲ್ಲಿ ಕುಳಿತು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ತಕ್ಷಣ ಎಚ್ಚೆತ್ತ ಮದ್ದೂರು ಸಂಚಾರಿ ಪೋಲಿಸರು ವಾಹನ ದಟ್ಟಣೆ ಬಗ್ಗೆ ವಾಟಾಳ್ ನಾಗರಾಜ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಅದಕ್ಕೆ ವಾಟಾಳ್ ನಾಗರಾಜು ಬಗ್ಗದ್ದಿದಾಗ ಎಚ್ಚರಿಕೆ ನೀಡಿ ಕೈ ಎಳೆಯಲು ಮುಂದಾದರು. ಇದರಿಂದ ಇನ್ನೂ ಕುಪಿತಗೊಂಡ ವಾಟಾಳ್ ನಾಗರಾಜು ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಮತ್ತೆ ಪೋಲಿಸರು ಪರಿಸ್ಥಿತಿ ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.




