ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೃಷಿ ಹಾಗೂ ಕೃಷಿಯೇತರ ಸಾಲವನ್ನೂ ನೀಡುತ್ತಿದೆ. ಗೊಬ್ಬರ ಹಾಗೂ ಪಶು ಆಹಾರವನ್ನು ಮಾರಾಟ ಮಾಡುವ ಮೂಲಕ ಸಂಘಕ್ಕೆ ಹೆಚ್ಚಿನ ಲಾಭವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಒಕ್ಕಗಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ ಹೇಳಿದರು.
ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಸಂಘಕ್ಕೆ ಪ್ರಶಸ್ತಿ ಬಂದಿದೆ. ಸಹಕಾರ ಸಂಘದಲ್ಲಿ ಒಗ್ಗಟ್ಟಿನಿಂದ ಕಾರ‍್ಯ ನಿರ್ವಹಿಸಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಚ್.ಎಂ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇಪ್ಕೋ ಕಂಪನಿಯಿಂದ ಸ್ಪ್ರೇ ಯಂತ್ರ ಹಾಗೂ ಹೆಚ್ಚಿನ ರಸಗೊಬ್ಬರ ಮತ್ತು ಪಶು ಆಹಾರ ಖರೀದಿ ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಆರ್.ಎ.ಪಿ.ಸಿ.ಎಂ.ಎಸ್. ಮಾಜಿ ನಿರ್ದೇಶಕ ಎಚ್.ಸಿ. ಶ್ರೀಧರ್, ಪಿಇಟಿ ಟ್ರಸ್ಟಿ ಎಚ್.ಸಿ.ಮೋಹನ್‌ಕುಮಾರ್, ಗ್ರಾ.ಪಂ. ಅಧ್ಯಕ್ಷ ಎಚ್.ಡಿ. ರವಿ, ಉಪಾಧ್ಯಕ್ಷೆ ಎಚ್.ಡಿ. ಪಲ್ಲವಿ, ಆರ್.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಎಚ್.ಎಸ್. ಯೋಗೀಶ್‌ಕುಮಾರ್ ಉಪಸ್ಥಿತರಿದ್ದರು.




