Sunday, November 22, 2026

ಪ್ರಾಯೋಗಿಕ ಆವೃತ್ತಿ

ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ | ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾದ ಆ‌ರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಂದಿದ್ದ ಸಂಜಯ್ ರಾಯ್ ಗೆ ಸ್ಥಳೀಯ ಸಿಯಾಲ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ 17 ಲಕ್ಷ ಹಣವನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ಆದರೆ ವಿದ್ಯಾರ್ಥಿನಿ ಪೋಷಕರು ನಮಗೆ ಬೇಕಾಗಿದ್ದು ನ್ಯಾಯ. ಹಣ ಬೇಡ ಎಂದು ತಿಳಿಸಿದ್ದಾರೆ.

ಕಳೆದ 2024ರ ಆಗಸ್ಟ್ 9ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯು ದೇಶದಾದ್ಯಂತ ಆಕ್ರೋಶ ಮೂಡಲು ಕಾರಣವಾಗಿತ್ತು.ಈ ಕೃತ್ಯವನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.ಕೋಲ್ಕತ್ತಾದಲ್ಲಿ ವೈದ್ಯರು ಎರಡು ತಿಂಗಳ ಕಾಲ ಕೆಲಸಕ್ಕೆ ಹೋಗದೆ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ವಿಚಾರಣೆಯನ್ನು ಇಲ್ಲಿನ ಸಿಯಾಲದ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ನಡೆಸಿದ್ದರು.ಅಪರಾಧ ಕೃತ್ಯ ನಡೆದ 162ನೆಯ ದಿನ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಹೇಳಿದ ನ್ಯಾಯಾಧೀಶ ಅನಿರ್ಬನ್ ದಾಸ್ ಜನವರಿ 20 ರಂದು ಶಿಕ್ಷೆ ಆದೇಶ ನೀಡುವುದಾಗಿ ಪ್ರಕಟಿಸಿದ್ದರು. ಅದರಂತೆ ಇಂದು ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಈ ಪ್ರಕರಣದ ಗೋಪ್ಯ ವಿಚಾರಣೆಯು ಸರಿಸುಮಾರು ಎರಡು ತಿಂಗಳು ನಡೆದಿತ್ತು. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರ), ಸೆಕ್ಷನ್ 66 (ಮಹಿಳೆಯ ಸಾವಿಗೆ ಕಾರಣವಾಗುವುದು) ಹಾಗೂ ಸೆಕ್ಷನ್ 103(1) (ಹತ್ಯೆ) ಅಡಿಯಲ್ಲಿ ರಾಯ್ ಅಪರಾಧಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ರಾಯ್ ವಿರುದ್ದದ ಎಲ್ಲ ಆರೋಪಗಳನ್ನು ಸಿಬಿಐ ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

ಸೆಕ್ಷನ್ 103(1)ರ ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಇತ್ತು.ಆದರೆ ಸಂಜಯ್ ರಾಯ್ ಗೆ ಜೀವಾವಧಿ ವಿಧಿಸಲು ಬದಲು ಮರಣ ದಂಡನೆ ವಿಧಿಸಬೇಕೆಂಬುದು ದೇಶದ ಜನರ ಒತ್ತಾಯವಾಗಿತ್ತು.ಆದರೆ ನ್ಯಾಯಾಧೀಶರು ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಅಲ್ಲ ಎಂದು ತಿಳಿಸಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಕರಣದ ಹಿನ್ನಲೆ

ಆಗಸ್ಟ್ 9ರಂದು ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿತ್ತು. ಆರೋಪಿ ಸಂಜಯ್ ರಾಯ್‌ನನ್ನು ಆಗಸ್ಟ್ 10ರಂದು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಆರೋಪಿ ಪೊಲೀಸ್‌ ಮಾಹಿತಿದಾರನಾಗಿಯೂ ಕೆಲಸ ಮಾಡುತ್ತಿದ್ದ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ, ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದಲ್ಲದೆ,ಗಲ್ಲಿಗೆ ಬೇಕಾದರೂ ಹಾಕಿ ಎಂದು ಆರೋಪಿ ಹೇಳಿಕೆ ನೀಡಿದ್ದ. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ 50 ಸಾಕ್ಷಿಗಳ ಹೇಳಿಕೆ ಪಡೆದಿತ್ತು. ಸಿಯಾಲ್ಲಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ನವೆಂಬರ್ 12ರಂದು ವಿಚಾರಣೆ ಆರಂಭಿಸಲಾಗಿತ್ತು. ಆರೋಪಿ ಸಂಜಯ್ ರಾಯ್‌ನನ್ನು ಜನವರಿ 9ರಂದು ವಿಚಾರಣೆ ನಡೆಸಲಾಗಿತ್ತು. ಈಗ ಈ ಪ್ರಕರಣದಲ್ಲಿ ಸಂಜಯ್ ರಾಯ್ ಅಪರಾಧಿ ಎಂದು ತೀರ್ಪು ನೀಡಲಾಗಿದ್ದು,ಜೀವಾವಧಿ ಶಿಕ್ಷೆ ವಿಧಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ