-
ಕಟ್ಟಡ ಕಾರ್ಮಿಕರ ಇತರೆ 13 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ
- ವಸತಿ ಮತ್ತು ಕಾರ್ಮಿಕ ಸಚಿವರಿಂದ ಕಟ್ಟಡ ಕಾರ್ಮಿಕರಿಗೆ ಅನ್ಯಾಯ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ಬಿಜೆಪಿ ಸರ್ಕಾರದ ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಿಐಟಿಯು ಪ್ರತಿಭಟನೆ ನಡೆಸಿದೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಸಂಘಟನೆಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗದಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ವಸತಿ ಸಚಿವ ವಿ ಸೋಮಣ್ಣ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಬ್ಬರೂ ಸೇರಿ, ಕಟ್ಟಡ ಕಾರ್ಮಿಕರಿಗಾಗಿ ಮೀಸಲಾಗಿದ್ದ ಹಣವನ್ನು ಸ್ಲಂ ಬೋರ್ಡ್ ಫಲಾನುಭವಿಗಳಿಗೆ ನೀಡಿದ್ದಾರೆ. ಇದರಿಂದ ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“2007ರಿಂದ ಅಸ್ವಿತ್ವದಲ್ಲಿರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರ ವಸತಿ ನಿರ್ಮಾಣಕ್ಕಾಗಿ ಇದುವರೆಗೂ ಒಂದು ಪೈಸೆಯನ್ನು ಧನ ಸಹಾಯ ಮಾಡಿರುವುದಿಲ್ಲ. ಆದರೆ, ವಸತಿ ಸಚಿವ ಮತ್ತು ಕಾರ್ಮಿಕ ಸಚಿವರಿಬ್ಬರು ಸೇರಿಕೊಂಡು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 76 ಕೋಟಿ ರೂ. ಹಣವನ್ನು ಕೊಳಚೆ ನಿರ್ಮೂಲನಾ ಮಂಡಳಿಯ 5,129 ಫಲಾನುಭವಿಗಳಿಗೆ ಹಂಚಿದ್ದಾರೆ” ಎಂದು ಕಿಡಿಕಾರಿದರು.
ಸಚಿವ ಶಿವರಾಮ್ ಹೆಬ್ಬಾರ್ ಅವರು ಎಲ್ಲ ಪಕ್ಷದ ಶಾಸಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಮುಂದಿನ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಮುತ್ತಪ್ಪ ಬಾ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಖಜಾಂಚಿ ಮೆಹಬೂಬ್ ಹವಾಲ್ದಾರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.




