ಜೀವನದ ಬಗ್ಗೆ ಭರವಸೆ ಮೂಡಿಸಿ ಸಮಾಜದಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟಿ ಸಮಾಜದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕೆಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎನ್.ಯತೀಶ್ ತಿಳಿಸಿದರು.
ಮಂಡ್ಯ ನಗರದ ಮಿಮ್ಸ್ ಸಂಸ್ಥೆಯ ಆವರಣದಲ್ಲಿ ವಿಶ್ವ ಆತ್ಮಹತ್ಯೆ ತಡಗಟ್ಟುವ ದಿನಾಚರಣೆಯ ಪ್ರಯುಕ್ತ `ಮಾನಸಿಕ ಆರೋಗ್ಯವಿಲ್ಲದೆ, ಆರೋಗ್ಯವಿಲ್ಲ’ ಎಂಬ ಘೋಷಣೆಯೊಂದಿಗೆ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದ ಶೈಲಿ, ಕುಟುಂಬದವರ ಸಹಕಾರ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಆತ್ಮಹತ್ಯೆಗೆ ಕಾರಣವಾಗಿರಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿದವರನ್ನು ರಕ್ಷಣೆ ಮಾಡುವುದಕ್ಕೆ ಹಾಗೂ ಜೀವನದಲ್ಲಿ ಭರವಸೆಯನ್ನು ಮೂಡಿಸುವುದಕ್ಕೆ ಸಮಾಲೋಚನೆ ನೀಡಬೇಕು. ಮಾನಸಿಕ ಒತ್ತಡ, ಆತ್ಮಹತ್ಯೆ ಮತ್ತು ಖಿನ್ನತೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷವಿಭಾಗವಿದೆ ಎಂದರು.
ಮಿಮ್ಸ್ ನ ಡಾ.ಬಿಂದಿಯಾ ಮಾತನಾಡಿ, ಸೆಪ್ಟೆಂಬರ್ ತಿಂಗಳನ್ನು ಆತ್ಮಹತ್ಯೆ ತಡೆಗಟ್ಟುವ ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಮಾಸವಾಗಿ ಆಚರಣೆ ಮಾಡಲಾಗುತ್ತಿದೆ. ಆತ್ಮಹತ್ಯೆಯು ಒಂದು ತಡೆಯಬಹುದಾದ ರೋಗವಾಗಿದ್ದು, ಆತ್ಮಹತ್ಯೆಯ ಆಲೋಚನೆ ಮಾಡದಂತೆ ಯಾವ ರೀತಿ ಧನಾತ್ಮಕ ಚಿಂತನೆ ನಡೆಸಬೇಕು ಎಂದು ಅರಿವು ಮತ್ತು ಜಾಗೃತಿ ಮೂಡಿಸುವುದು, ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ ಎಂದರು.
ಮಿಮ್ಸ್ ಸಂಸ್ಥೆಯ ಆವರಣದಿಂದ ಜಾಥಾ ಹೊರಟು ಬೆಂಗಳೂರು-ಮೈಸೂರು ಹೆದ್ದಾರಿಯ ಮಾರ್ಗವಾಗಿ ಸಂಜಯ ವೃತ್ತವನ್ನು ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷವಾಕ್ಯಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಿಮ್ಸ್ ಪ್ರಭಾರ ನಿದೇರ್ಶಕ ಡಾ.ಬಿ ಆರ್ ಹರೀಶ್, ವೈದ್ಯಕೀಯ ಅಧೀಕ್ಷಕ ಪಿ.ವಿ ಡಾ ಶ್ರೀಧರ್, ಪ್ರಾದ್ಯಾಪಕರಾದ ಡಾ.ಭಾಗ್ಯವತಿ, ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ್, ಅಕಾಡೆಮಿ ರಿಜಿಸ್ಟ್ರಾರ್ ಡಾ.ಶಣ್ಮುಖಪ್ಪ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಕ್ಲಮೇಟ್, ಪ್ಯಾರಾ ಮೆಡಿಕಲ್ ಸಹಾಯಕ ನಿರ್ದೇಶಕ ಡಾ.ಎಂ.ಎಸ್ ಸಿದ್ದೇಗೌಡ, ಡಾ.ಸುಭಾಷ್ ಬಾಬು, ಡಾ.ಎಸ್.ಎಂ.ಸುರೇಶ್, ಮಿಮ್ಸ್ ಪ್ರಾಂಶುಪಾಲ ಡಾ.ಟಿ.ಎಸ್.ತಮ್ಮಣ್ಣ ಉಪಸ್ಥಿತರಿದ್ದರು




