ಕಾಂಗ್ರೆಸ್ ಯುವ ನಾಯಕ ರಾಹುಲ್ಗಾಂಧಿ ಅವರು ನಡೆಸುತ್ತಿರುವ ಭಾರತ ಐಕ್ಯತಾ (ಭಾರತ್ ಜೋಡೋ) ಪಾದಯಾತ್ರೆಯು ಅ.3ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಆಗಮಿಸಲಿದ್ದು, ಪರಿಶಿಷ್ಠ ಜನಾಂಗದ ಎಲ್ಲಾ ಯುವಕರು, ಮುಖಂಡರು ಹಾಗೂ ಸಾರ್ವಜನಿಕರು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ವಿಭಾಗದ ಮಂಡ್ಯ ಜಿಲ್ಲಾಧ್ಯಕ್ಷ ಕಂಠಿ ಮನವಿ ಮಾಡಿದರು.
ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಚದುರಿ ಹೋಗಿರುವ ಎಲ್ಲರನ್ನು ಒಗ್ಗೂಡಿಸಬೇಕು, ಸುಭದ್ರ ಭಾರತ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ರಾಹುಲ್ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರ ಪಾತ್ರಯಾತ್ರೆ ಕೇರಳ ಮಾರ್ಗವಾಗಿ ಸಂಚರಿಸುತ್ತಿದ್ದು, ಅ.3ರಂದು ಮೈಸೂರಿನಿಂದ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸಂಚರಿಸಲಿದೆ. ಅಂದಿನ ಪಾದಯಾತ್ರೆಯಲ್ಲಿ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ದುರಾಳಿತದಿಂದ ದೇಶದ ಜನತೆ ಬೇಸತ್ತು ಹೋಗಿದ್ದಾರೆ, ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ಗ್ಯಾಸ್, ಪೆಟ್ರೂಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳು ಏರಿಕೆಯಾಗಿವೆ. ಜನರು ತಿನ್ನುವ ಅನ್ನಕ್ಕೂ ಸಹ ಜಿಎಸ್ಟಿ ಕಟ್ಟುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರದಿಂದ ಜನಸಾಮಾನ್ಯರು ಬಳಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದೀಪಕ್, ಆನಂದ್, ಟಿಎಂಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಕುರುಬರ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡ, ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಚಿಕ್ಕಾಡೆ ಮಹೇಶ್, ತಾಲ್ಲೂಕು ಯುವ ಘಟಕದ ಬ್ಲಾಕ್ ಅಧ್ಯಕ್ಷ ಭರತ್ ಪಟೇಲ್, ದಯಾನಂದ, ಸಿದ್ದಲಿಂಗಯ್ಯ, ಅರಸಯ್ಯ ಹಾಗೂ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.




