ಮಂಡ್ಯದ ಕಾವೇರಿನಗರ ಬಳಿಯಲ್ಲಿ ಪತ್ಯಕ್ಷವಾಗಿರುವ ಕಾಡಾನೆಗಳು ಚನ್ನಪಟ್ಟಣದ ಅರಣ್ಯ ಪ್ರದೇಶದಿಂದ ಆಹಾರವನ್ನರಸಿ ಮಂಡ್ಯದವರೆಗೆ ವಲಸೆ ಬಂದಿವೆ. ಪ್ರಸ್ತುತ ಎಲ್ಲ ಕಡೆ ಮಳೆಯಾಗಿ ಅಲ್ಲಿಯೇ ಆಹಾರ ಲಭ್ಯವಿದ್ದದರೂ, ವಿಭಿನ್ನವಾದ ಆಹಾರವನ್ನರಸಿ ಕಾಡಾನೆಗಳು ಇಲ್ಲಿಗೆ ಬಂದಿವೆ ಎಂದು ಮಂಡ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯೇ ಕಾರ್ಯಾಚರಣೆ
ಮಂಡ್ಯನಗರ ಹೊರವಲಯದ ಸದ್ವಿದ್ಯಾ ಶಾಲೆಯ ಬಳಿ ಎರಡು ಕಾಡಾನೆಗಳು ಪತ್ಯಕ್ಷವಾಗಿ, ಅಲ್ಲಿಯೇ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ, ಕತ್ತಲಾಗುತ್ತಿದ್ದ ಅನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಆರ್.ಎಫ್.ಓ ಚೈತ್ರ ಮಾಹಿತಿ ನೀಡಿದ್ಧಾರೆ.

ಆನೆಗಳು ಮುತ್ತತ್ತಿ ಅರಣ್ಯ ಭಾಗದಿಂದ ಮದ್ದೂರು ಮಾರ್ಗವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿಯಲ್ಲಿ ಕಳೆದ 3 ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದವು. ಆನಂತರ ಕಾಳೇನಹಳ್ಳಿ ಬಳಿಯ ಕಸ ವಿಲೇವಾರಿ ಘಟಕದ ಬಳಿ ಪತ್ಯಕ್ಷವಾಗಿದ್ದು. ಆನಂತರ ಇಂಡುವಾಳು- ಕಿರಗಂದೂರು ಭಾಗದಲ್ಲಿ ಕಾಣಿಸಿಕೊಂಡಿದ್ದವು. ಆನಂತರ ಕಾರಸವಾಡಿ ಮಹದೇಶ್ವರ ದೇವಾಲಯದ ಮಾರ್ಗವಾಗಿ ಕಾವೇರಿ ನಗರದ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ ಎಂದು ಬೀಟ್ ಪಾರೆಸ್ಟರ್ ಲೋಕೇಶ್ ನುಡಿ.ಕರ್ನಾಟಕ ಕಾಂ ಗೆ ಮಾಹಿತಿ ನೀಡಿದ್ದಾರೆ.
ಡ್ರೋನ್ ಕ್ಯಾಮೆರಾದ ಮೂಲಕ ಆನೆಗಳ ಚಲನವಲನ ಮೇಲೆ ನಿಗಾ ಇಟ್ಟಿದ್ದು, ಅವುಗಳ ವಲಸೆ ಸಂಬಂಧಿಸಿದಂತೆ ಸುತ್ತಮುತ್ತಲ ಜನರಿಗೆ ಮುನ್ನೇಚ್ಚರಿಕೆ ನೀಡುತ್ತಿದ್ದೇವೆಂದು ಲೋಕೇಶ್ ತಿಳಿಸಿದ್ಧಾರೆ.
ಹುಣಸೂರಿನಿಂದ ಬಂದ ಆನೆ ಕಾರ್ಯಪಡೆ
ಕಾಡಾನೆಗಳನ್ನು ಕಾಡಿಗೆ ಕಟ್ಟುವ ಕಾರ್ಯಾಚರಣೆ ನಡೆಸುವುದಕ್ಕಾಗಿ ಹುಣಸೂರಿನಿಂದ 18 ಅಧಿಕಾರಿಗಳನ್ನೊಳಗೊಂಡ ಆನೆ ಕಾರ್ಯಪಡೆಯನ್ನು ಕಡೆಸಿಕೊಳ್ಳಲಾಗಿದೆ. ಅದರೊಂದಿಗೆ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.




