ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ತೆಗೆದುಕೊಂಡ ದಿಟ್ಟ ನಿಲುವುಗಳಿಂದ ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
ಮದ್ದೂರು ಪಟ್ಟಣದ ಶಿವಪುರದ ಶ್ರೀಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಬಿಜೆಪಿ ಯುವ ಮೋರ್ಚಾ ಮದ್ದೂರು ಮಂಡಲ ವತಿಯಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ 72 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಂದ್ರಮೋದಿ ಅವರು ಕಠಿಣ ಪರಿಶ್ರಮ ಪಟ್ಟು ಕೆಲಸ ಮಾಡುವ ಮೂಲಕ ವಿಶ್ವವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಅಧಿಕಾರವಧಿಯಲ್ಲಿ ಭಾರತ ವಿಶ್ವ ಗುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೆ ಭಾರತ ಎಂದರೆ ಕಡೆಗಣಿಸುತ್ತಿದ್ದ, ವಿಶ್ವದ ಬೇರೆ ಬೇರೆ ದೇಶಗಳು ಇಂದು ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಜಿ, ಸಂಧಾನ ಮಾಡಿಸಿಕೊಳ್ಳುವ ಜತೆಗೆ ಸಹಾಯವನ್ನು ಪಡೆದುಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ದೇಶದ ಪ್ರಧಾನಿಯಂತೆ ಕೆಲಸ ಮಾಡುತ್ತಿಲ್ಲ ಬದಲಿಗೆ ಜನರ ಸೇವಕರಂತೆ ಕೆಲಸ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೂ ಅನುಕೂಲ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೆ ಮೋದಿಯವರು ಹಲವು ಯೋಜನೆ ಕೊಟ್ಟಿದ್ದಾರೆ. ತುಂಡು ಜಮೀನು ಹೊಂದಿರುವ ರೈತರ ಸಂಖ್ಯೆ ನೋಡಿಯೇ ಅವರು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹತ್ತು ಸಾವಿರ ಹಣ ನೀಡುತ್ತಿದ್ದಾರೆ. ಕಬ್ಬಿಗೆ 300 ರೂ ವಿಶೇಷ ಸಹಾಯಧನ ನೀಡಿದ್ದಾರೆ ಎಂದರು.
ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡು ಸಂಕಷ್ಟಲ್ಲಿರುವ ರೋಗಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು, ರಕ್ತಕ್ಕೆ ಪರ್ಯಾಯವಾದ ಯಾವುದೇ ವಸ್ತುವಿಲ್ಲದ ಕಾರಣ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು ಎಂದರು.
ಬಿಜೆಪಿ ಮುಖಂಡ ಡಾ.ಇಂದ್ರೇಶ್ ಮಾತನಾಡಿ, ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ವಿಶ್ವದಾಖಲೆ ಆಗುವಂತಹ ರಕ್ತದಾನ ಶಿಬಿರಗಳು ದೇಶವ್ಯಾಪಿ ನಡೆಯುತ್ತಿದೆ ಹರ್ಷ ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ 100 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಧುಗಂಗಾಧರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಪಿ.ಸಿ.ರಘು, ಯುವ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ನಿಡಘಟ್ಟ ಸುನೀಲ್, ಪುರಸಭಾ ಸದಸ್ಯ ಮ.ನ.ಪ್ರಸನ್ನಕುಮಾರ್, ಮುಖಂಡರಾದ ಕೆಂಪುಬೋರಯ್ಯ, ಡಾ.ಸದಾನಂದ, ರಾಮೇಗೌಡ, ಹೊನ್ನಲಗೆರೆಸ್ವಾಮಿ, ಶ್ವೇತಾ, ಮಮತಾರಾಂಖ, ಸಿಂಧು, ಹಾಗೂ ಮಹೇಂದ್ರ ಮತ್ತಿತರರಿದ್ದರು.




