Wednesday, November 18, 2026

ಪ್ರಾಯೋಗಿಕ ಆವೃತ್ತಿ

ಬಲವಂತದ ಮತಾಂತರದ ವಿರುದ್ಧ ಕ್ರಮಕ್ಕೆ ಆಗ್ರಹ

ದಲಿತ ಯುವಕನಿಗೆ ಒತ್ತಾಯಪೂರ್ವಕವಾಗಿ ಖತ್ನಾ ಮಾಡಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿರುವವರ ವಿರುದ್ಧ ಕಠಿಣ  ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾರ‍್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ‍್ಯಕರ್ತರು, ಹಿಂದೂ ದಲಿತ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೆ, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮದ್ದೂರು ತಾಲ್ಲೂಕಿನ ಯಡವನಹಳ್ಳಿ ಗ್ರಾಮದ 26 ವರ್ಷದ ಶ್ರೀಧರನನ್ನು ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾ, ನಯಾಜ್‌ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷ, ಸಯ್ಯದ್ ದಸ್ತಗೀರ್, ಮಹಮ್ಮದ್ ಇಕ್ಬಾಲ್, ರಫೀಕ್, ಶಬ್ಬೀರ್, ಖಾಲಿದ್, ಶಾಕಿಲ ಮತ್ತು ಅಲ್ತಾ ಅವರು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿ ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನಃಪರಿವರ್ತನೆ ಮಾಡಿ ಮರ್ಮಾಂಗದ ತುದಿ ಕತ್ತರಿಸಿ ಮತಾಂತರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಆತನಿಗೆ ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿ ಬಲವಂತವಾಗಿ ತಿನ್ನಿಸಿದ್ದಾರೆ, ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಕೂಡ ಪಡೆದಿದ್ದಾರೆ ಎಂದು ಆರೋಪಿಸಿದರು.

ಫೇಸ್ ಬುಕ್ ನಲ್ಲಿ ಪರಿಚಿತಳಾದ ಹುಬ್ಬಳಿಯ ಯುವತಿಯೊಂದಿಗೆ ಚಾಟಿಂಗ್ ಮಾಡಿದ್ದ ಶ್ರೀಧರ ಯುವತಿಯ ಕರೆಯ ಮೇರೆಗೆ ಸೆ. 18 ರಂದು ರಾತ್ರಿ ಹುಬ್ಬಳ್ಳಿಗೆ ತೆರಳಿ ಎರಡು ಮೂರು ದಿನ ಇದ್ದ. ಸೆ.21ರಂದು ರಾತ್ರಿ ಆತನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದರು. ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಆತನ ಮೇಲೆ ಹಲ್ಲೆ ನಡೆಸಿದವರೂ ಇದೇ ಮುಸ್ಲೀಮರಾಗಿದ್ದು, ತಕ್ಷಣ ಆತನಿಗೆ ರಕ್ಷಣೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ, ಬಿಜೆಪಿ ಮುಖಂಡರಾದ ವಿವೇಕ್, ಸಿ.ಟಿ. ಮಂಜುನಾಥ್, ಮಹಂತಪ್ಪ, ಶಂಕರ್, ಶ್ರೀಧರ್, ಬಿ.ಕೃಷ್ಣ, ಶಿವಕುಮಾರ್, ರಾಜು, ನಗರಸಭಾ ಸದಸ್ಯರಾದ ಚಂದ್ರು, ಶಿವಲಿಂಗಯ್ಯ, ಪ್ರಸನ್ನ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ