ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾದ ಪೇಸಿಎಂ ಅಭಿಯಾನ ಈಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ಮಂಗಳವಾರ ಮಂಡ್ಯ ನಗರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪೇಸಿಎಂ ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಕುರುಬರ ಹಾಸ್ಟೆಲ್ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಪೇಸಿಎಂ ಪೋಸ್ಟರ್ ಮೆರವಣಿಗೆ ನಡೆಸಿದರು. ನಂತರ ನಗರದ ಪ್ರಮುಖ ಬೀದಿಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ಧಿಕ್ಕಾರ ಕೂಗಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಹಗರಣಗಳು ನಡೆಯುತ್ತಿರುವುದು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ, ಎಲ್ಲಾ ಇಲಾಖೆಗಳಲ್ಲಿಯೂ ನಡೆಯುತ್ತಿರುವ ಹಗರಣಗಳನ್ನು ಕಂಡೂ ಕಾಣದಂತೆ ನೋಡಿಕೊಂಡು ಸುಮ್ಮನಿರುವ ದಶರಥನ ರೀತಿ ಆಡಳಿತ ನಡೆಸುತ್ತಿರುವ ಬಿಜೆಪಿ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಮಾತನಾಡಿ, ಪೇಸಿಎಂ ಅಭಿಯಾನ ಆರಂಭಿಸಿದ್ದೇವೆ, ನ್ಯಾಯ ಎನ್ನುವುದು ಎಲ್ಲರಿಗೂ ಒಂದೇ ಆಗಿರುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಶೇ.40 ರಷ್ಟು ಕಮಿಷನ್ ಧಂದೆ ಸುಳ್ಳಾ? ಬಿಜೆಪಿಯಂತಹ ಅಯೋಗ್ಯರು ಆಡಳಿತ ನಡೆಸುವುದೇ ಅವಮಾನಕರವಾಗಿದೆ,
ಕೋವಿಡ್ ಸಂದರ್ಭದಲ್ಲಿ ದುಡ್ಡು ಮಾಡಿಕೊಂಡವರೆಲ್ಲಾ ಸಚಿವರಾಗಿದ್ದಾರೆ, ಸಚಿವರಾದ ಆರ್.ಅಶೋಕ್, ಅಶ್ವತ್‌ನಾರಾಯಣ್ ಸೇರಿದಂತೆ ಪ್ರಮುಖರು ಲೂಟಿ ಮಾಡುವುದನ್ನೂ ಇನ್ನೂ ಬಿಟ್ಟಿಲ್ಲ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ನಗರಸಭೆ ಸದಸ್ಯ ರಾಮಲಿಂಗಣ್ಣ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್, ಮುಖಂಡರಾದ ಚಂದ್ರು, ಪ್ರಸನ್ನ, ಗುಣವಂತ, ನಿರಂಜನ್, ರಮೇಶ್ ಭಾಗವಹಿಸಿದ್ದರು.
ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ