ನಾಡು ಕಂಡ ಅಪ್ರತಿಮ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯವು ಹಲವು ಜನಪರ ಯೋಜನೆಗಳನ್ನು ಕಂಡಿವೆ, ನಾಡು ಇರುವತನಕ ಎಸ್.ಬಂಗಾರಪ್ಪ ಅವರ ಕೆಲಸ ಚಿರಸ್ಥಾಯಿಯಾರುತ್ತದೆ ಎಂದು ಕುಮಾರಬಂಗಾರಪ್ಪ ಅಭಿಮಾನಿಗಳ ಬಳಗದ ಮುಖ್ಯಸ್ಥ ಜಿ.ಎಸ್.ಕೃಷ್ಣ ಸ್ಮರಿಸಿದರು.
ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಪರಿಸರ ಸಂಸ್ಥೆಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಕುಮಾರ ಬಂಗಾರಪ್ಪ ಅಭಿಮಾನಿಗಳ ಬಳಗ ಆಯೋಜಿಸಿದ್ದ ಸೊರಬ ಕ್ಷೇತ್ರ ಶಾಸಕ ಕುಮಾರ ಬಂಗಾರಪ್ಪ ಅವರ 59ನೇ ವರ್ಷದ ಜನ್ಮದಿನ ಪ್ರಯುಕ್ತ ಗರ್ಭಿಣಿ-ಬಾಣಂತಿ ಮತ್ತು ಪೋಷಕರು-ನಿರ್ಗತಿಕಕರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡನಾಡಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ, ಎಸ್.ಬಂಗಾರಪ್ಪ ಅವರ ಮಗ ಕುಮಾರಬಂಗಾರಪ್ಪ ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ನಾಯಕ ನಟರಾಗಿ ಬೆಳೆದು, ರಾಜಕೀಯ ಪ್ರವೇಶ ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ, ಅಪಾರ ಅಭಿಮಾನಿಗಳ ಬಳಗವನ್ನೆ ಹೊಂದಿರುವ ಕುಮಾರ ಬಂಗಾರಪ್ಪ ಅವರು ಶಾಸಕರಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಎಂದರು.
ಇಂದು ಅವರ ಜನ್ಮದಿನವಾಗಿದೆ, ಹತ್ತಾರು ಸೇವಾ ಕಾರ್ಯಗಳು ನಡೆಯುತ್ತಿವೆ, ಮಂಡ್ಯ ನಗರದಲ್ಲಿನ ಅಭಿಮಾನಿಗಳು ಜಿಲ್ಲಾಸ್ಪತ್ರೆಗೆ ಬರುವ ಬಡಜನತೆಗೆ ಪೌಷ್ಠಿಕಾಹಾರ ನೀಡುವ ಮೂಲಕ ಅಳಿಲು ಸೇವೆ ಮಾಡಲು ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸಿದ್ದರಾಜು, ಆನಂದ, ಮಹೇಶ್, ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಮೇಶ್‌ವಿಶ್ವಕರ್ಮ ಮತ್ತಿತರರಿದ್ದರು.




