Thursday, October 24, 2024

ಪ್ರಾಯೋಗಿಕ ಆವೃತ್ತಿ

ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆಗೆ ಒತ್ತಾಯ:

ಮಂಡ್ಯ: ನಗರ ಸಭೆಯ ತರಕಾರಿ ಮಾರುಕಟ್ಟೆಯು ನವೀಕರಣಗೊಳ್ಳುತ್ತಿರುವ ಕಾರಣ, ಅಲ್ಲಿ ವ್ಯಾಪರ ವಹಿವಾಟು ನಡೆಸುತ್ತಿರುವ ವರ್ತಕರಿಗೆ ತಾತ್ಕಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿ ವ್ಯಾಪಾರಿಗಳು, ಮಳಿಗೆ ಮಾಲೀಕರು ಸೋಮವಾರ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಅವರಿಗೆ ಮನವಿಯನ್ನು ಸಲ್ಲಿಸಿದರು. ಕಳೆದ ನಲವತ್ತು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಆದರೆ, ಈಗ ಮಾರುಕಟ್ಠೆಯ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ನಾವು ನಿಯಮಿತವಾಗಿ ಮಳಿಗೆ ಕಂದಾಯ ಮತ್ತು ಬಾಡಿಗೆಯನ್ನು ಕಟ್ಟಿಕೊಂಡು ಬಂದಿದ್ದೇವೆ. ನಮಗೆ ಪೇಟೆಬೀದಿಯ ಹತ್ತಿರ, ಆಸು ಪಾಸಿನಲ್ಲೆ ಪರ್ಯಾಯವಾಗಿ ವ್ಯಾಪಾರ ಮಾಡಲು ಜಾಗವನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಮಂಡ್ಯ ನಗರದಿಂದ ಸ್ಬಲ್ಪ ದೂರವಿರುವ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಕೆಲವು ವರ್ತಕರು ಇಲ್ಲಿಂದ ಸ್ಥಳಾಂತಾರಗೊಂಡಿದ್ದಾರೆ. ಆ ಮಾರುಕಟ್ಟೆಯು ದೂರವಿರುವ ಕಾರಣಕ್ಕೆ ಕೆಲ ವರ್ತಕರು ಅಲ್ಲಿಗೆ ಹೋಗುತ್ತಿಲ್ಲ. ಪೇಟೆಬೀದಿ ಮಾರುಕಟ್ಟೆಯ ನವೀಕರಣ ಕಾಮಗಾರಿ ಕೈಗೊಳ್ಳಲು ಮಳಿಗೆ ಖಾಲಿ ಮಾಡಲು ನಗರಸಭೆಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸ ಮಾರುಕಟ್ಟೆಯು ನಿರ್ಮಾಣವಾಗುವ ತನಕ ತಾತ್ಕಲಿಕ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಮನವಿಯನ್ನು ಸ್ಬೀಕರಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಎಚ್.ಎಸ್.ಮಂಜು ಮಾತನಾಡಿ ಪೇಟೆಬೀದಿ ಬಳಿ ಇರುವ ಹಳೇ ತಾಲ್ಲೂಕು ಕಛೇರಿಯ ಆವರಣದಲ್ಲಿ ವ್ಯಾಪಾರ ಮಾಡಲು ವ್ಯಾಪರಸ್ಥರಿಗೆ ಈಗಾಗಲೇ ತಿಳಿಸಲಾಗಿದೆ. ಈ ವಿಷಯದ ಬಗ್ಗೆ ನಗರ ಸಭೆಯ ಪೌರಾಯುಕ್ತರ ಜೊತೆಗೂ ಚರ್ಚೆ ನಡೆಸಲಾಗಿದೆ ಮತ್ತು ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬಳಿ ಬದಲಿ ವ್ಯವಸ್ಥೆ ಮಾಡಲು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಮಾರುಕಟ್ಟೆಯ ನವೀಕರಣವು ಇನ್ನೂ 13-14 ತಿಂಗಳೊಳಗಾಗಿ ಮುಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಸಹಕಾರ ನೀಡಬೇಕು, ಆದಷ್ಟು ಬೇಗ ಅಂಗಡಿಗಳನ್ನು ಖಾಲಿ ಮಾಡಿಕೊಟ್ಟರೆ ಭೂಮಿ ಪೂಜೆ ಆರಂಭಿಸಲಾಗುವುದು ಎಂದರು.
ಪೌರಾಯುಕ್ತರಾದ ಎಸ್. ಲೋಕೇಶ್ ಮಾತನಾಡಿ ಹೊಸ ಮಳಿಗೆಗಳು ನವೀಕರಣಗೊಳ್ಳುವವರೆಗೂ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಮೂರು ಸ್ಥಳಗಳನ್ನು ಗುರುತಿಸಲಾಗಿದೆ, ವ್ಯಾಪಾರಿಗಳು ತಾವೇ ಚರ್ಚಿಸಿಕೊಂಡು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು, ಆಯ್ಕೆ ಮಾಡಿಕೊಂಡ ನಂತರ ಅಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಆರಂಭಿಕವಾಗಿ ಈ ನವೀಕರಣಕ್ಕೆ 4.97 ಕೋಟಿ ವೆಚ್ಚವಾಗುತ್ತಿದೆ. ಸದ್ಯಕ್ಕೆ ತಳ ಹಾಗೂ ಮೊದಲ ಮಹಡಿ (ಜಿ+1) ನಿರ್ಮಾಣ ಮಾಡಲಾಗುವುದು. ಒಟ್ಟು ಜಿ+3 ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕೆ ಒಟ್ಟಾರೆ 8 ಕೋಟಿ ವೆಚ್ಚವಾಗಲಿದೆ, ಮಳಿಗೆ ಪಡೆಯುವಲ್ಲಿ ವ್ಯಾಪಾರಿಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ಬಿ.ಕೆ.ಸೋಮಣ್ಣ, ಪ್ರದೀಪ್, ಶ್ರೀನಿವಾಸ್, ಗೌರಮ್ಮ, ಚಿಕ್ಕತಾಯಮ್ಮ ಮತ್ತಿತರು ಭಾಗವಹಿಸಿದ್ದರು.

Related Articles

ಅತ್ಯಂತ ಜನಪ್ರಿಯ

error: Content is protected !!