ಪ್ರಪಂಚದ ಕ್ರೀಡಾಭಿಮಾನಿಗಳ ಪಾಲಿನ ಬಹು ನಿರೀಕ್ಷೆಯ 2024ರ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಮಳೆಯಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಫ್ರೆಂಚ್ ಹವಾಮಾನ ಇಲಾಖೆ ಮೆಟಿಯೊ-ಫ್ರಾನ್ಸ್ ಹೇಳಿದ್ದು, ಸಾವಿರಾರು ಕೋಟಿ ರೂ. ನೀರಿನಲ್ಲಿ ಹೋಮವಾಗುವ ಸಾಧ್ಯತೆ ಎದುರಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಪ್ಯಾರಿಸ್ ಕಾಲಮಾನದಂತೆ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ, ಅಂದರೆ ಭಾರತೀಯ ಕಾಲಮಾನದಂತೆ ಇಂದು ಶುಕ್ರವಾರ(ಜು.26) ರಾತ್ರಿ 11 ಗಂಟೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಒಟ್ಟು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಮಳೆ ಸುರಿಯುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ವರದಿ ನೀಡಿರುವುದು ವಿಶ್ವದ ಕ್ರೀಡಾಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಸುಮಾರು 3 ಲಕ್ಷ ಕ್ರೀಡಾಭಿಮಾನಿಗಳು ಸೇರುವ ನೀರಿಕ್ಷೆ ಇದೆ. ಅಲ್ಲದೇ ವಿಶ್ವದಾದ್ಯಂತ ಕೋಟ್ಯಾಂತರ ಕ್ರೀಡಾಭಿಮಾನಿಗಳು ಈ ಸಮಾರಂಭವನ್ನು ಲೈವ್ ನಲ್ಲಿ ಕಣ್ತುಂಬಿಗೊಳ್ಳಲು ಕಾದು ಕುಳಿತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಸಂಘಟಿಸಲು 68.54 ಸಾವಿರ ಕೋಟಿ ರೂ. (8.2 ಬಿಲಿಯನ್ ಡಾಲರ್) ವೆಚ್ಚವಾಗಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಈ ಮೊತ್ತ 6ನೇ ಗರಿಷ್ಠ ವೆಚ್ಚವಾಗಿದೆ. ಕ್ರೀಡಾಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವನ್ನು ಕ್ರೀಡಾಂಗಣದ ಆವರಣದ ಹೊರಗೆ ಆಯೋಜಿಸಲಾಗಿದೆ. ಆದಾಗ್ಯೂ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. “ಸದ್ಯಕ್ಕೆ, ಉದ್ಘಾಟನಾ ಸಮಾರಂಭದಲ್ಲಿ ಮಳೆಯ ಅಪಾಯವನ್ನು ತಳ್ಳಿಹಾಕಲಾಗುವುದಿಲ್ಲ ಮತ್ತು ಮುನ್ಸೂಚನೆಗಳನ್ನು ಇನ್ನೂ ದೃಢೀಕರಿಸಬೇಕಾಗಿದೆ,” ಎಂದು ಮೆಟಿಯೊ-ಫ್ರಾನ್ಸ್ ಹೇಳಿದೆ.
ಕ್ರೀಡಾಂಗಣಕ್ಕೆ ಸಾಂಪ್ರದಾಯಿಕ ಮೆರವಣಿಗೆಗೆ ಬದಲಾಗಿ, ಸುಮಾರು 6,800 ಕ್ರೀಡಾಪಟುಗಳು 6 ಕಿಲೋಮೀಟರ್ (3.7 ಮೈಲುಗಳು)ವರೆಗೆ ಪ್ಯಾರಿಸ್‌ನ ಸೀನ್ ನದಿಯಲ್ಲಿ 100ಕ್ಕೂ ಹೆಚ್ಚು ದೋಣಿಗಳಲ್ಲಿ ಪರೇಡ್ ಮಾಡುತ್ತಾರೆ. ಈ ಒಲಿಂಪಿಕ್ಸ್‌ನಲ್ಲಿ 10,700 ಕ್ರೀಡಾಪಟುಗಳು ಸ್ಪರ್ಧಿಸುವ ನಿರೀಕ್ಷೆಯಿದೆಯಾದರೂ, ನೂರಾರು ಸಾಕರ್ ಆಟಗಾರರು ಪ್ಯಾರಿಸ್‌ನ ಹೊರಗೆ ನೆಲೆಸಿದ್ದಾರೆ. ಸರ್ಫರ್‌ಗಳು ಟಹೀಟಿಯಲ್ಲಿದ್ದಾರೆ ಮತ್ತು ಎರಡನೇ ವಾರದಲ್ಲಿ ನಡೆಯುವ ಅವರ ಸ್ಪರ್ಧೆಗಳಿಗೆ ಇನ್ನೂ ಅನೇಕರು ಆಗಮಿಸಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಪಾವತಿಸಿದ 3,20,000 ಟಿಕೆಟ್-ಹೋಲ್ಡರ್‌ಗಳು ನೂರಾರು ಆಹ್ವಾನಿತ ಜನರು ಸೇರಿದಂತೆ ಅಥ್ಲೀಟ್‌ಗಳನ್ನು ದೋಣಿಗಳಲ್ಲಿ ನದಿಯ ಉದ್ದಕ್ಕೂ ಮೆರವಣಿಗೆ ಮಾಡುವುದನ್ನು ನೋಡಲು ಸೀನ್‌ನ ದಡದಲ್ಲಿ ಸಾಲುಗಟ್ಟಿ ನಿಲ್ಲುವ ನಿರೀಕ್ಷೆಯಿದೆ.
ಉದ್ಘಾಟನಾ ಸಮಾರಂಭ
2024ರ ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತವಾಗಿ ಜುಲೈ 26ರಂದು ಸೀನ್ ನದಿಯಲ್ಲಿ ಐತಿಹಾಸಿಕ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಈ ಅದ್ಧೂರಿ ಈವೆಂಟ್‌ನಲ್ಲಿ ಭಾರತ ತಂಡವೂ ಭಾಗವಹಿಸುತ್ತಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು 32 ವಿಭಾಗಗಳಲ್ಲಿ 16 ದಿನಗಳ ಕಾಲ ರೋಚಕ ಸ್ಪರ್ಧೆಗಳೊಂದಿಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಮೆರವಣಿಗೆಯು ಆಸ್ಟರ್ಲಿಟ್ಜ್ ಸೇತುವೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಐಫೆಲ್ ಟವರ್‌ನ ಮುಂಭಾಗದಲ್ಲಿ ಟ್ರೋಕಾಡೆರೊದಲ್ಲಿ ಕೊನೆಗೊಳ್ಳುತ್ತದೆ.