ಹಿಂದುಳಿದ ವರ್ಗಗಳು ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಕೇಳಿ ಪಡೆಯುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಬಿಜೆಪಿಯು ಮೀಸಲಾತಿಯ ಕಟ್ಟಾ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಮಂಡ್ಯ ನಗರದ ಗ್ರೀನ್‌ಪ್ಯಾಲೇಸ್ ಸಭಾಂಗಣದಲ್ಲಿ ಬುಧವಾರ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಶಾಖೆಯನ್ನು ನೂತನ ಕಾರ್ಯಕಾರಿ ಮಂಡಳಿಯನ್ನು ಘೋಷಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಂಗ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿದೆ. ರಾಜ್ಯದಲ್ಲಿ ಶೇ.35ರಷ್ಟಿರುವ ಹಿಂದುಳಿದ ವರ್ಗಗಳ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶ್ರೇಯೋಭಿವೃದ್ಧಿ ಮಾಡುವಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ದೇವರಾಜ ಅರಸು ಅವರು ಹಾವನೂರು ವರದಿ ಜಾರಿಗೊಳಿಸಿದ ಬಳಿಕ ಕೇಂದ್ರದಲ್ಲಿ ಕೂಡ ಮಂಡಲ್ ಆಯೋಗದ ಮೂಲಕ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಯಿತು ಎಂದ ಅವರು, ಮೀಸಲಾತಿ ಮತ್ತು ಸವಲತ್ತು ಹಂಚಿಕೆಯಲ್ಲಿ ಬಿಜೆಪಿ ಸರ್ಕಾರ ತಾರತಮ್ಯವೆಸಗುತ್ತಿದೆ ಎಂದು ಕಿಡಿಕಾರಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಹಿಂದುಳಿದ ಸಮುದಾಯಗಳು ಜಾತಿವಾರು ಸಂಘಟನೆ ಮತ್ತು ಹೋರಾಟದ ಜೊತೆಗೆ ಹಿಂದುಳಿದ ವರ್ಗಗಳ ಸಮಗ್ರ ಏಳಿಗೆಗಾಗಿಯೂ ಶ್ರಮಿಸಬೇಕಿದೆ. ರಾಜಕೀಯವಾಗಿ ಚುನಾವಣೆಗಳಲ್ಲಿ ಉತ್ತರ ನೀಡುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಪೂರಕವಾದ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ನೂತನ ಅಧ್ಯಕ್ಷ ಕೆ.ಎಚ್.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿ ಸವಲತ್ತುಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸಲಾಗುವುದು. ಸದ್ಯದಲ್ಲೇ ಶೋಷಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಹೇಳಿದರು.
ನೂತನ ಪದಾಧಿಕಾರಿಗಳ ನೇಮಕ
ರಾಜ್ಯ ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷರಾಗಿ ಬಿ.ಲಿಂಗಯ್ಯ, ಅಧ್ಯಕ್ಷರಾಗಿ ಕೆ.ಎಚ್.ನಾಗರಾಜು, ಕಾರ್ಯಾಧ್ಯಕ್ಷರಾಗಿ ಎಲ್.ಸಂದೇಶ್, ಉಪಾಧ್ಯಕ್ಷರಾಗಿ ಬೋರೇಗೌಡ, ಎಂ.ವಿ.ಶಕುಂತಲ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೃಷ್ಣ, ಖಜಾಂಚಿ ಎಚ್.ಪಿ.ಸತೀಶ್, ಸಹಕಾರ್ಯದರ್ಶಿ ಎಂ.ಎಸ್.ರಾಜಣ್ಣ, ಸಂಘಟನಾ ಕಾರ್ಯದರ್ಶಿ ಡಿ.ರಮೇಶ್, ನಾಗರತ್ನ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಎನ್.ಕೃಷ್ಣ, ಬಿ.ಶಿವರಾಜು, ಎಂ.ಸಿ.ಕೃಷ್ಣ, ರವೀಂದ್ರಬಾಬು, ಪ್ರದೀಪ್, ಜೆ.ರಾಜು, ಸಿ.ಚಂದ್ರಶೇಖರ್, ರಾಮೇಗೌಡ, ಬಿ.ಕೆ.ರವಿ, ಕೆ.ನಾಗರಾಜು, ಬಾಲಕೃಷ್ಣ, ಕೃಷ್ಣ, ಡಿ.ಮಂಜು, ಶ್ರೀನಿವಾಸ್, ಮಹೇಶ್, ಎಂ.ಆರ್.ಲಕ್ಷ್ಮಿ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಕೆ.ಎಂ.ಕೃಷ್ಣಮೂರ್ತಿ, ಚಿಕ್ಕನಾಯಕನಹಳ್ಳಿ ಸಿ.ಎಲ್.ರವಿಕುಮಾರ್, ಮುಖಂಡರಾದ ಎಂ.ಬೋರೇಗೌಡ, ಬಿ.ಲಿಂಗಯ್ಯ, ಸುರೇಶ್, ಡಿ.ರಮೇಶ್, ಎಂ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.




