ಮನೆಗೊಂದು ಗಿಡ ನೆಡುವುದರ ಮುಖಾಂತರ ಪ್ರತಿಯೋಬ್ಬರೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಸಾಕ್ಷರತಾ ಹಾಗೂ ಸಮಾಜಸೇವಕ ಶ್ರೀನಿವಾಸ್ ತಿಳಿಸಿದರು.
ನಾಗಮಂಗಲ ತಾಲ್ಲೂಕಿನ ಹೊನ್ನಬೆಟ್ಟದ ಹೊಸೂರು ಗೇಟ್ ಬಳಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ಜರುಗಿದ ಗಿಡನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ವಿಚಾರವಾಗಿ ಮನುಷ್ಯ ತಾತ್ಸಾರ ಮನೋಭಾವ ಮಾಡುವುದು ತರವಲ್ಲ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ವಸ್ತುಗಳೇ ನಮ್ಮ ಆರೋಗ್ಯಕ್ಕೆ ಔಷಧಿಗಳಾಗಿವೆ, ಪ್ರಕೃತಿಯಲ್ಲಿ ಸಿಗುವಂತಹ ಕಲ್ಲು ಮಣ್ಣು ಗಿಡಮರಗಳು ಔಷಧಿ ಗುಣಗಳನ್ನು ಹೊಂದಿದ್ದು ಅವುಗಳನ್ನು ನಮ್ಮ ಪೂರ್ವಜರು ಬಳಸಿಕೊಂಡು ನೂರಾರು ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಿ ಬದುಕುತ್ತಿದ್ದರು ಎಂದರು.
ಪ್ರಕೃತಿಯಲ್ಲಿ ಮೂರನೇ ಎರಡರಷ್ಟು ಅರಣ್ಯ ಸಂಪತ್ತು ಇತ್ತು. ಈಗ ಅವುಗಳೆಲ್ಲ ನಾಶವಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಹಾಗೂ ಆಯಸ್ಸು, ಆರೋಗ್ಯ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ. ಚೈತ್ರ, ಯೋಗ ತಜ್ಞ ಮುತ್ತುರಾಜ್, ಅಖಿಲಾ, ನಾಗೇಶ್, ಪ್ರಗತಿ, ಚೈತ್ರ , ಶಿವರಾಜು ಮತ್ತು ಯಶವಂತ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು




