Sunday, May 19, 2024

ಪ್ರಾಯೋಗಿಕ ಆವೃತ್ತಿ

ವೇದಿಕೆಯಲ್ಲೇ ಶಾಸಕರಿಗೆ ಮುಜುಗರ ತಂದ ಸ್ವಪಕ್ಷೀಯ ಗ್ರಾ.ಪಂ.ಅಧ್ಯಕ್ಷ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಗೌರವದಿಂದ ಗ್ರಾ.ಪಂ.ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಸಿಟ್ಟಾದ ಗ್ರಾ.ಪಂ.ಅಧ್ಯಕ್ಷರೊಬ್ಬರು ತಮ್ಮದೇ ಪಕ್ಷದ ಶಾಸಕರಿದ್ದ ವೇದಿಕೆಯಲ್ಲಿ ಶಿಷ್ಟಾಚಾರದ ಪಾಠ ಹೇಳಿಕೊಡುವ ಮೂಲಕ ಮುಜುಗರ ತಂದ ಘಟನೆ ಇಂದು ನಡೆದಿದೆ.

ಮಳವಳ್ಳಿ ತಾಲ್ಲೂಕಿನ ಕೋರೇಗಾಲ ಗ್ರಾಮದಲ್ಲಿ 8 ಕೋಟಿ ವೆಚ್ಚದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನಾ ಸಮಾರಂಭ ಆಯೋಜನೆ ಮಾಡಲಾಗಿತ್ತು. ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪಾಲಿಟೆಕ್ನಿಕ್ ಕಾಲೇಜಿನ ಉದ್ಘಾಟನೆಗೆ ಗ್ರಾ.ಪಂ.ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರನ್ನು ಶಂಕುಸ್ಥಾಪನೆ ಕಲ್ಲಿನಲ್ಲಿ ಹಾಗೂ ಆಹ್ವಾನ ಪತ್ರಿಕೆಯ ಮೂಲೆಯಲ್ಲಿ ಕಾಟಾಚಾರಕ್ಕೆ ಹಾಕಲಾಗಿದೆ‌. ಗ್ರಾ.ಪಂ.ಸದಸ್ಯರ ಹೆಸರನ್ನು ಹಾಕದೆ ಅವಮಾನ ಮಾಡಲಾಗಿದೆ. ಸರ್ಕಾರದ ಶಿಷ್ಟಾಚಾರ ಪಾಲಿಸಿಲ್ಲ ಎಂದು ಗ್ರಾ‌.ಪಂ‌.ಅಧ್ಯಕ್ಷ ನಾಗೇಂದ್ರ ವೇದಿಕೆಯಲ್ಲಿಯೇ ಶಾಸಕ ಅನ್ನದಾನಿ ಎದುರು ಕಾಲೇಜಿನ ಪ್ರಾಂಶುಪಾಲ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಾಲಿಟೆಕ್ನಿಕ್ ಕಾಲೇಜು ಶೆಟ್ಟಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ. ಆದರೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಈ ಹಿಂದೆಯೂ ಹಲವು ಬಾರಿ ನನಗೆ ಅವಮಾನ ಮಾಡಲಾಗಿದೆ. ಗ್ರಾ.ಪಂ.ಸದಸ್ಯರನ್ನು ಕಾಲ ಕಸದಂತೆ ನೋಡುತ್ತಿದ್ದಾರೆ. ಇಂದು ಹಣಕಾಸಿನಿಂದ ಎಂಎಲ್ಎ, ಎಂಪಿ ಆಗೋದು ಸುಲಭ. ‌ಆದರೆ ಗ್ರಾ.ಪಂ.ಸದಸ್ಯನಾಗೋದು ಕಷ್ಟ. ಪಾಲಿಟೆಕ್ನಿಕ್ ಕಾಲೇಜು ಯಾವ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿದ್ದು ಹೀಗೆ ಮಾಡಿದರ ಹಿಂದಿರುವ ಕಾರಣವೇನು? ಗ್ರಾ.ಪಂ‌.ಅಧ್ಯಕ್ಷರು ಹಾಗೂ ಸದಸ್ಯರು ಎಂದರೆ ಅಷ್ಟೊಂದು ತಾತ್ಸಾರವೇ?

ಒಂದು ಸಲ ಆದ್ರೆ ತಡಕೋಬಹುದು, ಪದೇ ಪದೇ ಈ ರೀತಿ ತಾರತಮ್ಯ ಮಾಡಿದರೆ ಹೇಗೆ?
ಏಕೆ ಹೀಗೆ ನಮ್ಮನ್ನ ಕಡೆಗಣಿಸುತ್ತಿದ್ದಾರೆ. ಈ ರೀತಿ ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದು
ಶಾಸಕ ಅನ್ನದಾನಿ ಎದುರೇ ವೇದಿಕೆಯಲ್ಲಿ ಬೇಸರದಿಂದ ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಜೆಡಿಎಸ್ ಪಕ್ಷದ ಸದಸ್ಯನೊಬ್ಬ ಅವರ ಪಕ್ಷದ ಶಾಸಕನ ಎದುರು ಸಾರ್ವಜನಿಕರ ಮುಂದೆ ಈ ರೀತಿ ಶಿಷ್ಟಾಚಾರದ ಉಲ್ಲಂಘನೆ ಬಗ್ಗೆ ಸಾಕಷ್ಟು ಮಾತನಾಡಿದ್ದು ಶಾಸಕ ಅನ್ನದಾನಿ ಅವರಿಗೆ ಮುಜುಗರ ಉಂಟು ಮಾಡಿತು. ನೂರಾರು ಜನರ ಮುಂದೆ ಶಾಸಕರನ್ನು ಮುಂದೆಯೇ ಪ್ರಶ್ನೆ ಮಾಡಿದ್ದು ಶಾಸಕರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಜನರು ಮಾತನಾಡಿಕೊಂಡರು.

ಶಾಸಕರ ಉತ್ತರ

ಗ್ರಾಂ.ಪಂ‌.ಅಧ್ಯಕ್ಷ ನಾಗೇಂದ್ರ ಅವರ ಪ್ರಶ್ನೆಗಳಿಗೆ ವೇದಿಕೆಯಲ್ಲಿ ಉತ್ತರ ನೀಡಿದ ಶಾಸಕ ಡಾ.ಕೆ.ಅನ್ನದಾನಿ, ಸಂಸದರು, ಸಚಿವರು, ಶಾಸಕರು ಇದ್ದ ವೇದಿಕೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಶಿಷ್ಟಾಚಾರ ಪಾಲನೆ ಬರುತ್ತದೆ. ಅಂತೆಯೇ ಈ ಕಾಲೇಜು ಮಳವಳ್ಳಿ ಸರ್ಕಾರಿ ಪಾಲಿಕೆಟ್ನಿಕ್ ಕಾಲೇಜಿನದ್ದಾಗಿದ್ದು, ಹೀಗಾಗಿ ಯಾವುದೇ ಗೊಂದಲ ಬೇಡ ಎಂದರು.

ನಾಗೇಂದ್ರ ಅವರು ನಮ್ಮ ಪಕ್ಷದವರೇ ಆಗಿದ್ದು, ಅವರಿಗೆ ಬೇಸರವಾಗಿದ್ದರೆ ನಾಳೆಯೇ ಕಟ್ಟಡದ ಉದ್ಘಾಟನೆ ಕಲ್ಲನ್ನು ತೆಗೆಸಿ ಬೇರೆ ಕಲ್ಲನ್ನು ಹಾಕಿಸುತ್ತೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!