ಎಐಸಿಸಿ ಯುವ ಮುಖಂಡ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆ ಅ.3ರಂದು ಮಂಡ್ಯ ಜಿಲ್ಲೆಯ ಗಡಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3ರಂದು ಶ್ರೀರಂಗಪಟ್ಟಣದ ಲಕ್ಷ್ಮೀಪುರ ಗೇಟ್ ಗೆ ಆಗಮಿಸಲಿದೆ, ಅಂದು ಮಧ್ಯಾಹ್ನ 3.30 ಗಂಟೆಯವರೆಗೆ ಶ್ರೀರಂಗಪಟ್ಟಣದ ಪರಿವರ್ತನ ಶಿಕ್ಷಣ ಸಂಸ್ಥೆಯಲ್ಲಿ ಊಟ ವಿಶ್ರಾಂತಿ ಹಾಗೂ ಪರಸ್ಪರ ಸಂವಾದ ಕಾರ್ಯಕ್ರಮ ನಡೆಯಲಿದೆ. ನಂತರ ಮತ್ತೆ 4 ಗಂಟೆಗೆ ಯಾತ್ರೆಯು ಶ್ರೀರಂಗಪಟ್ಟಣ ಬಸ್ ಸ್ಟಾಂಡ್ ನಿಂದ ಪ್ರಾರಂಭವಾಗಿ, ಪಾಂಡವಪುರ ತಲುಪಲಿದೆ ಎಂದು ವಿವರಿಸಿದರು.
ಅ.4 ಮತ್ತು 5 ರಂದು ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಯಾತ್ರೆಗೆ ರಜೆ ಇರಲಿದ್ದು, ಅ.6ರಂದು ಪಾಂಡವಪುರ ತಾಲ್ಲೂಕಿನ ಬೆಳ್ಳಾಳೆ ಗ್ರಾಮದಿಂದ ಯಾತ್ರೆಯು ಪ್ರಾರಂಭವಾಗಿ ನಾಗಮಂಗಲ ತಾಲ್ಲೂಕಿನ ಖರಾಢ್ಯ ಬಳಿ 11.30ಗಂಟೆಗೆ ವಿರಮಿಸಲಿದೆ, ಮತ್ತೆ ಸಂಜೆ 4 ಗಂಟೆಗೆ ಯಾತ್ರೆ ಪ್ರಾರಂಭವಾಗಿ ಬ್ರಹ್ಮದೇವರಹಳ್ಳಿ ತಲುಪಲಿದೆ ಎಂದು ಅವರು ಹೇಳಿದರು.
ಅ.7ರ ಬೆಳಿಗ್ಗೆ 6.30 ಗಂಟೆಗೆ ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿ ಗ್ರಾಮದಿಂದ ನಾಗಮಂಗಲ ಪಟ್ಟಣದ ಅಂಚೆ ಭೂವನಹಳ್ಳಿವರೆಗೆ ಯಾತ್ರೆ ನಡೆಯಲಿದ್ದು, ಅನಂತರ ಊಟ, ವಿಶ್ರಾಂತಿ ಹಾಗೂ ಸಂವಾದ ನಡೆಯಲಿದ್ದು, ಸಂಜೆ 4 ಗಂಟೆಗೆ ಮತ್ತೆ ಯಾತ್ರೆ ಪ್ರಾರಂಭವಾಗಿ ಬೆಳ್ಳೂರು ಪಟ್ಟಣ ತಲುಪಲಿದೆ, ಅನಂತರ ರಾತ್ರಿ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಮುಗಿಸಿ ಅ.8ರಂದು ತುಮಕೂರು ಜಿಲ್ಲೆಯಿಂದ ಯಾತ್ರೆ ಪ್ರಾರಂಭವಾಗಲಿದೆ ಎಂದು ವಿವರಿಸಿದರು.
ಅ.3ರಂದು ಯಶವಂತಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಜಯನಗರ, ಮದ್ದೂರು, ಮಂಡ್ಯ, ಮಂಡ್ಯ ಕಸಬಾ, ಮಂಡ್ಯ ನಗರ ಹಾಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಮುಖಂಡರು ಯಾತ್ರೆಯಲ್ಲಿ ಭಾಗಿಯಾಗಲಿದ್ಧಾರೆ.
ಅ.6ರಂದು ಗೋವಿಂದರಾಜನಗರ, ಶಾಂತಿನಗರ, ಗಾಂಧಿನಗರ, ಮಳವಳ್ಳಿ, ವಿಜಯ ನಗರ, ಅರಕಲಗೂಡು, ಕೆ.ಆರ್.ಪೇಟೆ ಕ್ಷೇತ್ರಗಳ ಮುಖಂಡರು ಯಾತ್ರೆಯಲ್ಲಿ ಭಾಗಿಯಾಗುವರು. ಅ.7ರಂದು ಯಲಹಂಕ, ದಾಸರಹಳ್ಳಿ, ಬ್ಯಾಟರಾಜನಪುರ, ಪುಲಿಕೇಶಿನಗರ, ಆನೇಕಲ್, ಶ್ರವಣಬೆಳಗೋಳ, ಹಾಸನ, ಹೊಳೆನರಸೀಪುರ ಹಾಗೂ ನೆಲಮಂಗಲದ ಕೇಂದ್ರ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಲಿದ್ಧಾರೆಂದು ವಿವರಿಸಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಭಾರತ ಜೋಡೋ ಯಾತ್ರೆಯೂ ಐತಿಹಾಸಿಕ ಯಾತ್ರೆಯಾಗಿದ್ದು, ಎಲ್ಲಾ ಕಾಂಗ್ರೆಸ್ ಮುಂಖಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಶ್ರೀಕಾಂತ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಎಸ್ಸಿ,ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣ, ಮುಖಂಡರಾದ ರುದ್ರಪ್ಪ, ಸತೀಶ್ ಸಿದ್ದರೂಢ ಹಾಗೂ ರಾಮಕೃಷ್ಣ ಉಪಸ್ಥಿತರಿದ್ದರು.




