Tuesday, November 24, 2026

ಪ್ರಾಯೋಗಿಕ ಆವೃತ್ತಿ

ಗಾಂಧೀಜಿಯ ಸಾಮರಸ್ಯ ಭಾರತ ನಿರ್ಮಾಣಕ್ಕೆ ಹೋರಾಡೋಣ: ಬಿಟಿವಿ

ಇಂದು ಭಾರತದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆಗಳು ನಡೆಯುತ್ತಿವೆ. ಓಟು ಗಳಿಕೆಗಾಗಿ ಸಮಾಜದ ಸಾಮರಸ್ಯವನ್ನು ಜಾತಿ- ಧರ್ಮದ ಹೆಸರಿನಲ್ಲಿ ಒಡೆಯುತ್ತಿದ್ದು, ಗಾಂಧೀಜಿಯವರ ಸಾಮರಸ್ಯದ ಭಾರತ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ ಎಂದು ಪ್ರಗತಿಪರ ವಕೀಲ ಬಿ.ಟಿ. ವಿಶ್ವನಾಥ್ ಅಭಿಪ್ರಾಯ ಪಟ್ಟರು.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಗಾಂಧಿ ಪ್ರತಿಮೆಯ ಮುಂಭಾಗ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಸಂಘಟನೆ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿರುವವರು, ಬುದ್ಧ- ಕುವೆಂಪು ಆಶಯಗಳಿಗೆ ಧಕ್ಕೆ ತಂದವರು ವಿಜೃಂಭಿಸುತ್ತಿದ್ದಾರೆ. ಓಟು ಗಳಿಗೆಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ. ಇಂತಹವರಿಂದ ಭಾರತವನ್ನು ಕಾಪಾಡಿಕೊಳ್ಳಲು ಪ್ರಜ್ಞಾವಂತರಾದ ನಾವೆಲ್ಲರೂ ಒಂದಾಗಬೇಕಾಗಿದೆ. ಕೋಮು ಸಾಮರಸ್ಯ ಕಾಪಾಡಿಕೊಂಡು ಜಾತ್ಯಾತೀತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಹೋರಾಡೋಣ ಎಂದರು.

ಕರ್ನಾಟಕ ಜನಶಕ್ತಿಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಇಂದು ದೇಶವನ್ನು ಜಾತಿ,ಧರ್ಮದ ಹೆಸರಿನಲ್ಲಿ ಭಾಗ ಮಾಡಲು ಕೋಮುವಾದಿಗಳು ನಿಂತಿದ್ದಾರೆ. ಜಾತಿ-ಮತಗಳ ಮಧ್ಯೆ ಉತ್ತಮ ಬಾಂಧವ್ಯವಿದ್ದ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿರುವ ಕೋಮುವಾದಿಗಳಿಂದ ದೇಶ ರಕ್ಷಣೆಗಾಗಿ, ಗಾಂಧೀಜಿಯವರ ಐಕ್ಯತೆಯ ಭಾರತ ನಿರ್ಮಾಣಕ್ಕಾಗಿ ಹೋರಾಡಬೇಕಿದೆ ಎಂದರು.

ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, ಇಂದು ಗಾಂಧಿಯವರನ್ನು ಕೊಂದ ಗೋಡ್ಸೆ ಸಂತಾನಗಳು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಕೋಮು ಸೌಹಾರ್ದತೆಯ ದೇಶವನ್ನು ಜಾತಿ-ಧರ್ಮದ ಹೆಸರಿನಲ್ಲಿ ಬಲಿ ಕೊಡಲು ನಿಂತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಂದುಗೂಡಿ ಗಾಂಧೀಜಿಯವರ ಸಾಮರಸ್ಯದ ಭಾರತಕ್ಕಾಗಿ ಪ್ರತಿ ಹೋರಾಟ ನಡೆಸಬೇಕಿದೆ ಎಂದರು.

ಮಹಿಳಾ ಮುನ್ನಡೆಯ ಶಿಲ್ಪಾ, ಸೌಮ್ಯ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಗರಾಜು, ಸಹನ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ