Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಕಪಿಮುಷ್ಠಿಯಲ್ಲಿ ದೇಶದ ಮಾಧ್ಯಮಗಳು : ನರೇಂದ್ರಸ್ವಾಮಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಇಡೀ ದೇಶದ ಮಾಧ್ಯಮಗಳನ್ನು ತಮ್ಮ ಕಪಿಮುಷ್ಠಿಯಲ್ಲಿರಿಸಿಕೊಂಡಿದ್ದು, ವಿರೋಧ ಪಕ್ಷಗಳು ಮಾಡುವ ಯಾವುದೇ ಟೀಕೆ, ಟಿಪ್ಪಣಿಗಳು,  ಕಾರ್ಯಕ್ರಮಗಳು ಪ್ರಸಾರವಾಗದಂತೆ ತಡೆಯೊಡ್ಡಿದೆ, ಸಂಸತ್ ನಲ್ಲಿ ಮಾತನಾಡಲು ಹೋದರೆ ಅಲ್ಲೂ ಬಜರ್ ಒತ್ತಿ ತಡೆಯೊಡ್ಡಲಾಗುತ್ತದೆ. ಆದ್ದರಿಂದ ರಾಹುಲ್ ಗಾಂಧಿಯವರು ಜನರ ಮಧ್ಯಕ್ಕೆ ಬಂದು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ಧಾರೆ ಎಂದು ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ನಿರುದ್ಯೋಗ ಹೆಚ್ಚಾಗಿದೆ, ಬೆಲೆ ಏರಿಕೆ ಮಿತಿ ಮೀರಿ ಗಗನ ಮುಟ್ಟಿದೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ, ವಿರೋಧ ಪಕ್ಷಗಳು ಮಾತನಾಡಿದರೆ ಮಾಧ್ಯಮಗಳು ಪ್ರಸಾರ ಮಾಡುತ್ತಿಲ್ಲ, ಇಂತಹ ದುಃಸ್ಥಿತಿ ಯಾವುದೇ ಸರ್ಕಾರ ಅಧಿಕಾರಲ್ಲಿದ್ದಾಗ ಉಂಟಾಗಿರಲಿಲ್ಲ. ಆದರೆ ಬಿಜೆಪಿ ಬಂದ ನಂತರ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಈ ಹಿಂದೆ ಕರಾವಳಿಯಲ್ಲಿ ಪರೇಶ್ ಮೆಸ್ತಾ ಸಾವನ್ನು ಬಿಜೆಪಿ ನಾಯಕರು ಕೊಲೆ ಎಂದು ಬಿಂಬಿಸಿ ಬಾಯ್ಬಾಯಿ ಬಡಿದುಕೊಂಡರು. ಈಗ ಸಿಬಿಐ ವರದಿ ಬಿಡುಗಡೆಯಾಗಿದ್ದು, ಅದು ಸಾವು ಎಂದು ಸಾಬೀತಾಗಿದೆ, ಬಿಜೆಪಿ ನಾಯಕರು ಇನ್ನೊಬ್ಬರ ಶವದ ಮೇಲೆ ರಾಜಕೀಯ ಸೌಧ ಕಟ್ಟಿಕೊಳ್ಳಲು ಯಾವಾಗಲೂ ಯೋಚಿಸುತ್ತಿರುತ್ತಾರೆ ಎಂದು ಕಿಡಿಕಾರಿದರು.

ಪ್ರಬುದ್ಧ- ಜ್ಞಾನಿ ರಾಹುಲ್ ಗಾಂಧಿ 

ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುವ ಸಂದರ್ಭದಲ್ಲಿ ನಾನು ರಾಹುಲ್ ಗಾಂಧಿಯವರ ಜೊತೆಯಲ್ಲಿಯೇ ಇದ್ದೆ, ಅವರು ಸರಳ ವ್ಯಕ್ತಿತ್ವದ ಪ್ರಬುದ್ಧ ಜ್ಞಾನಿಯಾಗಿದ್ದಾರೆ. ಅವರಿಗೆ ಜನಸಾಮಾನ್ಯರ ಜೀವನವನ್ನು ಹತ್ತಿರದಿಂದ ನೋಡಿ ತಿಳಿದುಕೊಳ್ಳುವ ತುಡಿತವಿದೆ, ಅವರು ಯಾತ್ರೆ ಸಂದರ್ಭದಲ್ಲಿ ಕಿರಂಗೂರು ಬಳಿ ಒಬ್ಬ ಮೆಕ್ಯಾನಿಕ್ ನನ್ನು ನೋಡಿ ಆತನ ಸಣ್ಣ ಗ್ಯಾರೇಜ್ ತೆರಳಿ, ಆತನ ಜೀವನದ ಬಗ್ಗೆ ಪ್ರಶ್ನಿಸಿ ತಿಳಿದು ಕೊಂಡರು, ಅಲ್ಲದೆ ಬುಟ್ಟಿ ಹೆಣಿಯುವ ಹೆಣ್ಣು ಮಗಳೊಬ್ಬಳ ನೋವನ್ನು ಆಲಿಸಿದರು. ಅವರಿಗೆ ಬಡವರ ಬಗ್ಗೆ ನಿರಂತರ ತುಡಿತವಿದೆ ಎಂದು ವಿವರಿಸಿದರು.

ರಾಹುಲ್ ಗಾಂಧಿ ಟೀಕೆಗಾಗಿಯೇ ಬಿಜೆಪಿಯಿಂದ ಸಾವಿರಾರು ಕೋಟಿ ವೆಚ್ಚ

ಸರಳ, ಸ್ಷಚ್ಚ ಮನಸ್ಸಿನ ರಾಹುಲ್ ಗಾಂಧಿಯವರನ್ನು ಟೀಕೆ ಮಾಡುವುದಕ್ಕಾಗಿಯೇ ಬಿಜೆಪಿಯೂ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ ಎಂದು ಆರೋಪಿಸಿ ನರೇಂದ್ರ ಸ್ವಾಮಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ರಾಹುಲ್ ಗಾಂಧಿ ಅವರಿಗೆ ವಿಪರೀತ ಭದ್ರತೆ ಇದ್ದ ಕಾರಣ, ಅವರ ಪ್ರಾಥಮಿಕ ವಿದ್ಯಾಭ್ಯಾಸ ಮನೆಯಲ್ಲೆ ನಡೆಯಿತು. ಹಾಗಾಗಿ ಅವರಿಗೆ ಯಾರು ಸ್ನೇಹಿತರಿರಲಿಲ್ಲ. ಅತಿಯಾದ ಭದ್ರತೆಯಲ್ಲೆ ಅವರ ಶಿಕ್ಷಣ ಮುಗಿಯಿತು.

ರಾಜೀವ್ ಗಾಂಧಿ ಹತ್ಯೆಯಾದಾಗಲೂ ಅವರು  ಬಾಲಕರಾಗಿದ್ದರೂ ಆಗ ಅವರಿಗೆ ರಾಜಕೀಯದ ಅರಿವು ಇರಲ್ಲಿಲ್ಲ, ಆದರೆ ಅಂದಿನ ರಾಹುಲ್ ಗಾಂಧಿಗೂ ಇಂದಿನ ರಾಹುಲ್ ಗಾಂಧಿಗೂ ಅಪಾರವಾದ ವ್ಯತ್ಯಾಸವಿದೆ. ಅವರು ಎಲ್ಲಾ ಭದ್ರತೆಗಳನ್ನು ತೊರೆದು ಜನಸಾಮಾನ್ಯರ ನಡುವೆ ಬಂದಿದ್ದಾರೆ ಎಂದು ಬಣ್ಣಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ