ವಿಶೇಷಚೇತನರು ದೇವರ ಮಕ್ಕಳು.ಅವರಿಗೆ ಸಮಾಜದ ತೋರಿಕೆಯ ಸಹಾನುಭೂತಿ, ಅನುಕಂಪ ಬೇಕಾಗಿಲ್ಲ. ಅವರಲ್ಲಿರುವ ಸಾಮರ್ಥ್ಯ ಗುರುತಿಸಿ ಅದಕ್ಕೆ ಅನುಗುಣವಾಗಿ ಸಾಧನೆ ಮಾಡಲು ಅವಕಾಶ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕೆಂದು ಕ್ರೀಡಾ ಮತ್ತು ರೇಷ್ಮೆ ಸಚಿವ ಸಚಿವ ಡಾ.ನಾರಾಯಣಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಮಹಾರಾಷ್ಟ್ರ ಮುಂಬೈ ಮಹಾನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೇಬಲಿಟೀಸ್ ಸಂಸ್ಥೆಯು ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತಿ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನರ ಸಾಮಾಜಿಕ ಜಾಗೃತಿ ಹಾಗೂ ಕಿವುಡುತನ ತಪಾಸಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈನಲ್ಲಿ ವೈದ್ಯಕೀಯ ಸಂಸ್ಥೆಯಲ್ಲಿ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ತಾಲ್ಲೂಕಿನ ಭಾರತೀಪುರ ಗ್ರಾಮದ ಭೋಜರಾಜುಗೌಡ ಅವರು ಕಿವುಡುತನ ಸೇರಿದಂತೆ ಅಂಗವಿಕಲತೆಯಿಂದ ಬಳಲುತ್ತಿರುವ ನೂರಾರು ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಅವರ ದೋಷಕ್ಕನುಗುಣವಾಗಿ ಸಾಧನ ಸಲಕರಣೆಗಳನ್ನು ವಿತರಿಸಲು ಮುಂದೆ ಬಂದಿದ್ದಾರೆ. ಇವರ ಸಮಾಜಮುಖಿ ಕಾಳಜಿ ಹಾಗೂ ಜನ್ಮಭೂಮಿಯ ಬಗ್ಗೆ ಇರುವ ಬದ್ಧತೆಯನ್ನು ನಾನು ಮನಸಾರೆ ಶ್ಲಾಘಿಸುತ್ತೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ.ಧನಂಜಯ್ ಅವರು ಮಾತನಾಡಿ, ನೆರೆಯ ಮಹಾರಾಷ್ಟ್ರ ರಾಜ್ಯದ ಮುಂಬೈ ಮಹಾನಗರದಿಂದ ತಜ್ಞ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಕೃಷ್ಣರಾಜಪೇಟೆ ತಾಲ್ಲೂಕಿನ ವಿಶೇಷಚೇತನರು ಹಾಗೂ ವಿಕಲಾಂಗರಿಗೆ ಸಾಧನ ಸಲಕರಣೆಗಳು ಸೇರಿದಂತೆ ವೈದ್ಯಕೀಯ ಸೇವೆ ನೀಡಲು ಮುಂದೆ ಬಂದು ತಮ್ಮ ಹೃದಯಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದಾರೆ. ಆರೋಗ್ಯ ಇಲಾಖೆಯ ವತಿಯಿಂದ ಅವರಿಗೆ ಸಂಪೂರ್ಣ ಸಹಕಾರ ನೀಡುವ ಜೊತೆಗೆ ಸಹಕಾರ ಕಾರ್ಯಗಳಿಗೆ ನಮ್ಮ ತಜ್ಞರೂ ಜೊತೆಯಾಗಿ ಸೇವೆ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಲಿದ್ದಾರೆ ಎಂದು ಹೇಳಿದರು.
ಜಾಗೃತಿ ಶಿಬಿರದಲ್ಲಿ ತಹಶೀಲ್ದಾರ್ ಎಂ.ವಿ.ರೂಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬಿಇಓ ಆರ್.ಎಸ್.ಸೀತಾರಾಮ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್.ಶಿವಕುಮಾರ್, ಮುಂಬೈ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಅರುಣ್ ಬಾನಿಕ್, ಡಾ.ಗಾಯತ್ರಿಅಹುಜಾ, ಸಂಯೋಜಕರಾದ ಗಂಗಾಧರಗೌಡ, ಭೋಜರಾಜುಗೌಡ, ರಾಜಶೇಖರಸ್ವಾಮಿ ಜಿ.ಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಜಿಲ್ಲಾ ಹಾಫ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಸಿಡಿಪಿಓ ಅರುಣಕುಮಾರ್ ಮತ್ತಿತರರಿದ್ದರು.




