ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನ ಪ್ರಸಿದ್ಧ ಶ್ರೀ ನಿಮಿಷಾಂಬ ದೇವಾಲಯದ ಹುಂಡಿ ಎಣಿಕೆ ಕಾರ್ಯ ದೇವಾಲಯ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನೇತೃತ್ವದಲ್ಲಿ ನಡೆಯಿತು.
ಕಳೆದ 2 ತಿಂಗಳ ಹಿಂದೆ ಎಣಿಕೆ ಕಾರ್ಯ ನಡೆಸಲಾಗಿದ್ದು, ದೇವಾಲಯದ ಒಟ್ಟು 18 ಹುಂಡಿಗಳ ಸುರಿದು ಎಣಿಕೆ ಮಾಡಲಾಯಿತು. ಎಲ್ಲಾ ಹುಂಡಿಗಳಿಂದ 32, 97, 455 ರೂಗಳು ಸಂಗ್ರಹವಾಗಿದೆ. ಚಿನ್ನ 103 ಗ್ರಾಂ, ಬೆಳ್ಳಿ 336 ಗ್ರಾಂ . ದೊರೆತಿದ್ದು, ಅಲ್ಲದೆ ವಿವಿಧ ದೇಶಗಳ ಕರೆನ್ಸಿ ನೋಟುಗಳು ಸಹ ಹುಂಡಿಯಲ್ಲಿ ಸಂಗ್ರಹವಾಗಿದೆ.

ಬ್ಯಾನ್ ಮಾಡಲಾಗಿರುವ 1000 ರೂಗಳ 20 ನೋಟುಗಳನ್ನು ಸಹ ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. ಶ್ರೀರಂಗಪಟ್ಟಣ ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿಗಳು, ವಿವಿಧ ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು, ಎಣಿಕೆ ಹಣವನ್ನು ಎಸ್‌ಬಿಐ ಬ್ಯಾಂಕಿನಲ್ಲಿ ಜಮಾ ಮಾಡಲಾಗಿದೆ ಎಂದು ದೇವಾಲಯದ ಇಒ ಮಹೇಶ್ ತಿಳಿಸಿದ್ದಾರೆ.
ದೇವಾಲಯದ ಸಿಬ್ಬಂದಿ ಹಾಗೂ ಸಮಿತಿ ಸದಸ್ಯರು ಎಣಿಕೆ ಕಾರ್ಯದಲ್ಲಿ ಉಪಸ್ಥಿತರಿದ್ದರು.




