Thursday, November 19, 2026

ಪ್ರಾಯೋಗಿಕ ಆವೃತ್ತಿ

ಅರಳುವ ಮುನ್ನವೇ ಬಾಡಿದ ಮುಗ್ಧ ಕಂದನ ಸಾವಿಗೆ ಹೊಣೆ ಯಾರು?

✍🏿ಜಿ.ಸಂತೋಷ್

ಇತ್ತೀಚೆಗೆ ತಾನೇ ನಮ್ಮ ನುಡಿ ಕರ್ನಾಟಕ. ಕಾಮ್ ವೆಬ್ ಸೈಟಿನಲ್ಲಿ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಬಳಿಯ ನ್ಯಾಮನಳ್ಳಿಯ ಒಂದೂವರೆ ವರ್ಷದ ಕೀರ್ತನ ಎಂಬ ಹೆಣ್ಣು ಕಂದಮ್ಮ ಮಂಡ್ಯ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವಿಗೀಡಾದ ವರದಿಯನ್ನು ಪ್ರಕಟಿಸಿದ್ದೆವು.

ಮಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಕೀರ್ತನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಮಂಡ್ಯ ಮೆಡಿಕಲ್ ಕಾಲೇಜಿನ ನಿರ್ದೇಶಕರ ಕಛೇರಿಯಲ್ಲಿ ಕೀರ್ತನ ಕುಟುಂಬ, ಕರ್ನಾಟಕ ರಾಜ್ಯ ಸಂಘ, ರೈತ ಮುಖಂಡರು, ಕರ್ನಾಟಕ ಜನಶಕ್ತಿ ಸೇರಿದಂತೆ ಹಲವು ಮುಖಂಡರ ಸಭೆ ನಿಗದಿಯಾಗಿತ್ತು.

ಸಭೆಯಲ್ಲಿ ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಪ್ರಾಂಶುಪಾಲ ಡಾ.ತಮ್ಮಣ್ಣ, ಸ್ಥಾನಿಕ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮತ್ತು ಮಗುವಿಗೆ ಚಿಕಿತ್ಸೆ ನೀಡಿದ ಎಲ್ಲಾ ವೈದ್ಯರಿದ್ದರು.

ಮೃತಪಟ್ಟ ಕೀರ್ತನ ಕುಟುಂಬದ ಸದಸ್ಯರು ತಾವು ಮಗುವನ್ನು ದಾಖಲು ಮಾಡಿದ ಸಂದರ್ಭದ ಬಗ್ಗೆ ಮಾಹಿತಿ ನೀಡಿದರು.ಅಂದು ಮಗು ವಾಂತಿ ಮತ್ತು ಭೇದಿಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿತ್ತು. ತಕ್ಷಣ ನಾವು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದೆವು.ಅಂದು ಮಕ್ಕಳ ಚಿಕಿತ್ಸಾ ಘಟಕದಲ್ಲಿ ಎರಡು ಮೂರು ವರ್ಷದ ಅನುಭವ ಇರುವ ಸಹಾಯಕ ವೈದ್ಯರು ನಮ್ಮ ಮಗುವಿಗೆ ಚಿಕಿತ್ಸೆ ನೀಡಿದರು. ಮಗುವಿನ ಆರೋಗ್ಯ ಸ್ಥಿತಿ ಬಗ್ಗೆ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ್ ಗೆ ಮುಂಚಿತವಾಗಿ ಈ ಮಾಹಿತಿಯನ್ನು ನೀಡದೆ ಇರುವುದು ಸಭೆಯ ಗಮನಕ್ಕೆ ಬಂದಿತ್ತು.

ಒಂದು ಕಡೆ ಕರ್ತವ್ಯದ ಹಾಜರಾತಿ ಪುಸ್ತಕದಲ್ಲಿ ಡಾ.ಮಂಜುನಾಥ್ ಸಹಿ ಹಾಕಿದ್ದಾರೆ. ಆದರೆ ನಾನು ಆ ಸಂದರ್ಭದಲ್ಲಿ ಸ್ಥಳದಲ್ಲಿರಲಿಲ್ಲ.ಹಾಗಾಗಿ ಮಗುವಿನ ಚಿಕಿತ್ಸೆ ಬಗ್ಗೆ ಕೊನೆಯ ಹಂತದಲ್ಲಿ ನನ್ನ ಗಮನಕ್ಕೆ ಬಂದಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್ ತಿಳಿಸಿದರು. ಈ ಬಗ್ಗೆ ಪೋಸ್ಟ್ ಮಾರ್ಟಂ ವರದಿ ಬಂದ ನಂತರವಷ್ಟೆ ಸಂಪೂರ್ಣ ತನಿಖೆಯ ಮಾಹಿತಿ ಹೊರ ಬೀಳಲಿದೆ. ಚಿಕಿತ್ಸೆ ನೀಡಿದ ವೈದ್ಯರ ತಂಡ ಮಗುವಿನ ಮರಣ ನಂತರವಷ್ಟೇ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್ ಗೆ ವಿಷಯ ತಿಳಿಯಿತು ಎಂಬುದು ಮಾತಕತೆಯಿಂದ ಸ್ಪಷ್ಟವಾಯಿತು.

ಸಮಸ್ಯೆಗಳ ಕೂಪ
ಹಲವು ಸಮಸ್ಯೆಗಳ ಕೂಪವಾಗಿರುವ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಎಡವಟ್ಟುಗಳು ಮುಂದುವರೆಯುತ್ತಲೇ ಇದೆ. ಹಲವು ಬಾರಿ ಇಂತಹ ಎಡವಟ್ಟುಗಳನ್ನು ಈ ಹಿಂದಿನ ನಿರ್ದೇಶಕರ ಗಮನಕ್ಕೆ ತರಲಾಗಿತ್ತು. ಕೀರ್ತನಾಳನ್ನು ದಾಖಲಿಸಿದ ತಕ್ಷಣ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿ ಸಮಯ ವ್ಯರ್ಥ ಮಾಡಿದರು.45 ನಿಮಿಷದ ಗೋಲ್ಡನ್ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೆ ನಮ್ಮ ಮಗುವನ್ನು ಉಳಿಸಿಕೊಳ್ಳಬಹುದಿತ್ತು.ಆದರೆ ಸಮಯ ವ್ಯರ್ಥ ಮಾಡಿದ್ದು ಮಗುವಿನ ಸಾವಿಗೆ ಕಾರಣವಾಯಿತು.

ಇದಕ್ಕೆಮಂಡ್ಯ ಜಿಲ್ಲಾಸ್ಪತ್ರೆ ಕಾರಣ ಎಂದು ಕುಟುಂಬ ವರ್ಗದವರು ನಿರ್ದೇಶಕರಿಗೆ ದೂರಿದರು. ಕೀರ್ತನ ಸಾವಿಗೆ ಕಾರಣರಾದ ವೈದ್ಯರನ್ನು ಈ ಕೂಡಲೇ ಕಡ್ಡಾಯ ರಜೆಯ ಮೇಲೆ ಕಳಿಸಿ, ಅಮಾನತು ಮಾಡಬೇಕೆಂದು ನಿರ್ದೇಶಕರಿಗೆ ಒತ್ತಾಯಿಸಲಾಯಿತು.

ಮಗು ಕೀರ್ತನಾಗೆ ಯಾವ ಯಾವ ರೀತಿಯ ಚಿಕಿತ್ಸೆಯನ್ನು ನೀಡಲಾಯಿತು ಎಂಬ ವಿವರವನ್ನೆಲ್ಲಾ ತಿಳಿಸುವಂತೆ ನಿರ್ದೇಶಕರು ಅಂದು ಕಾರ್ಯ ನಿರ್ವಹಿಸಿದ್ದ ವೈದ್ಯರುಗಳಿಗೆ ಹೇಳಿದರು. ಇಂಟರ್ನ್ ಶಿಪ್ ನಲ್ಲಿದ್ದ ಡಾ.ಪಾಗವಲಂ, ರೆಸಿಡೆಂಟ್ ವೈದ್ಯರಾದ ಡಾ.ಕೆ.ಶ್ರುತಿ ಮತ್ತು ಡಾ.ನಿಶ್ಚಲ್ ಅವರು ಮಗುವಿನ ದಾಖಲಾತಿಯ ನಂತರ ಏನೇನು ಚಿಕಿತ್ಸಾ ಕ್ರಮ ಕೈಗೊಂಡೆವು ಎಂಬುದನ್ನು ಸಭೆಯಲ್ಲಿ ವಿವರಿಸಿದರು.

ಮಗು ದಾಖಲಾದ ಸಂದರ್ಭದಲ್ಲಿ ಉಸಿರಾಟ ಕ್ರಿಯೆಯಲ್ಲಿ ಏರು-ಪೇರಾಗಿ ಉಸಿರಾಟದ ಮಟ್ಟ (ಸ್ಯಾಚುರೇಷನ್) 77-100 ರಷ್ಟು ಇತ್ತು. ನಾವು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದರು. ಸಭೆಯಲ್ಲಿದ್ದವರು, ಮಗು ಕೀರ್ತನಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ,ತೀವ್ರ ನಿಗಾ ಘಟಕದಲ್ಲಿ ಏಕೆ ಚಿಕಿತ್ಸೆ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಎರಡು ಕಡೆಯ ಅಭಿಪ್ರಾಯವನ್ನು ಪಡೆದುಕೊಂಡ ನಂತರ ಮಗುವಿನ ಸಾವಿಗೆ ಕಾರಣರಾದ, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳವುದಾಗಿ ಮಂಡ್ಯ ಜಿಲ್ಲಾಸ್ಪತ್ರೆಯ ನಿರ್ದೇಶಕ ಡಾ.ಮಹೇಂದ್ರ ಭರವಸೆಯಿತ್ತರು. ಹಾಗೆಯೇ ಈ ಸಭೆಯ ನಡಾವಳಿವನ್ನು ದಾಖಲಿಸಿ, ದಾಖಲೆಯ ಪ್ರತಿಯನ್ನು ಕೊಡುವಂತೆ ಸಭೆಯ ಸದಸ್ಯರು ಮನವಿ ಮಾಡಿಕೊಂಡರು. ಈ ಸಂಬಂಧಪಟ್ಟಂತೆ ನಿರ್ಲಕ್ಷ್ಯ ತೋರಿರುವ ವೈದ್ದರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮುಂದುವರೆಸುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದರು.

ಈ ಸಂಬಂಧ ಮಗು ಕೀರ್ತನಾ ಕುಟುಂಬದವರು ಕಾನೂನು ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.ಕೀರ್ತನಾ ಸಾವಿನ ಸಂಪೂರ್ಣ ತನಿಖೆ ಮಾಡುವಂತೆ ಮಂಡ್ಯ ಜಿಲ್ಲಾ ಪೋಲಿಸ್ ವರಿ‍ಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಹೆಚ್ಚಿನ ತನಿಖೆ ನಡೆಸುವಂತೆ ಒತ್ತಾಯಿಸುತ್ತೇವೆ ಎಂದರು.

ಅರಳುವ ಮುನ್ನವೇ ಬಾಡಿದ ಪುಟ್ಟ ಕಂದ ಕೀರ್ತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಮಗುವಿನ ಪೋಷಕರ ಅಳಲಾಗಿದೆ.ಇನ್ನಾದರೂ ಮಿಮ್ಸ್ ವೈದ್ಯರು ಸರಿಯಾಗಿ ಕರ್ತವ್ಯ ಪಾಲಿಸಿ,ಇಂತಹ ಮುಗ್ಧ ಕಂದಮ್ಮಗಳು ಬಲಿಯಾಗದಂತೆ ನೋಡಿಕೊಳ್ಳಲಿ ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಸಭೆಯಲ್ಲಿ ಮಗುವಿನ ಕುಟುಂಬದವರಾದ ರೈತ ಮುಖಂಡ ಶಿವರಾಮು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರು, ರೈತ ಮುಖಂಡರಾದ ಹರೀಶ್, ಮುದ್ದೇಗೌಡ, ಬಿ. ಕೃಷ್ಣಪ್ರಕಾಶ್, ಕರ್ನಾಟಕ ಜನಶಕ್ತಿಯ ಮುಖಂಡರಾದ ಸಿದ್ದರಾಜು, ಪೂರ್ಣಿಮ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ