Saturday, May 18, 2024

ಪ್ರಾಯೋಗಿಕ ಆವೃತ್ತಿ

ನರೇಗಾ ಕಾಮಗಾರಿಗೆ ಯಂತ್ರಗಳ ಬಳಕೆ : ಪ್ರತಿಭಟನೆ

ನರೇಗಾ ಯೋಜನೆಯಡಿ ಕೈಕೊಳ್ಳುವ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಕೆ ಮಾಡಿ ಕೂಲಿಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವುದಲ್ಲದೇ, ಭ್ರಷ್ಟಾಚಾರದಲ್ಲಿ ನಿರತವಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ  ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ
ಮುಖಂಡರು ಹಾಗೂ ಕೃಷಿ ಕೂಲಿಕಾರರು ಮಳವಳ್ಳಿ ತಾಲ್ಲೂಕು ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯತಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು
ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಕೂಡಲೇ
ಕೃಷಿ ಕೂಲಿಕಾರರಿಗೆ ಸಮರ್ಪಕ ಕೂಲಿ ನೀಡಬೇಕೆಂದು ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ದೇವಿ ಮಾತನಾಡಿ,
ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಕೂಲಿಕಾರರಿಗೆ ಸರಿಯಾಗಿ ಕೆಲಸ ನೀಡದೇ ಅಧಿಕಾರಿಗಳು
ವಂಚಿಸುತ್ತಿದ್ದಾರೆ, ಕೃಷಿ ಕೂಲಿಕಾರರ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಇದು
ಮುಂದುವರೆದರೇ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಳವಳ್ಳಿ ತಾಲ್ಲೂಕಿನ ಹಲವೆಡೆ ಕೂಲಿಕಾರರಿಗೆ ನರೇಗಾ ಕೆಲಸ ನೀಡದೇ ಯಂತ್ರಗಳ ಮೂಲಕ ಕೆಲಸ
ಮಾಡಿಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಗ್ರಾಮ ಪಂಚಾಯಿತಿಗಳ
ಕೂಲಿ ಕಾರ್ಮಿಕರಿಗೆ ತಕ್ಷಣವೇ ಕೆಲಸ ನೀಡಬೇಕು. ಬಾಕಿ ಉಳಿದಿರುವ ಕಾಯಕ ಬಂಧುಗಳಿಗೆ
ಗುರುತಿನ ಚೀಟಿ ನೀಡಬೇಕು. ಕಾಯಕ ಬಂಧುಗಳಿಗೆ ಮೊಬೈಲ್ ಪೋನ್ ವಿತರಣೆ ಸೇರಿದಂತೆ ನಮ್ಮ
ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.

ತಾ.ಪಂ. ಇಒ ರಾಮಲಿಂಗಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ
ಮಾತನಾಡಿ, ಯಂತ್ರಗಳ ಮೂಲಕ ಕೆಲಸ ಮಾಡಿಸುತ್ತಿರುವ ಬಗ್ಗೆ ತನಿಖೆ ನಡೆಸಲು ಈಗಾಗಲೇ
ಒಂದು ತಂಡ ರಚನೆ ಮಾಡಿ ತನಿಖೆ ನಡೆಸಲು ಸೂಚಿಸಲಾಗಿದೆ, ವರದಿ ಬಂದ ಕೂಡಲೇ ತಪ್ಪಿಸ್ಥರ
ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಂತ-ಹಂತವಾಗಿ ಕೂಲಿಕಾರರ ಬೇಡಿಕೆಗಳನ್ನು
ಈಡೇರಿಸಲಾಗುವುದೆಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಎಲ್.ಭರತ್ ರಾಜ್, ಸುಶೀಲಾ, ಸುನೀತಾ, ಜಯಶೀಲಾ,
ಮಂಜುಳಾ, ಗುರುಸ್ವಾಮಿ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!