ಮಳವಳ್ಳಿ ಪಟ್ಟಣದಲ್ಲಿ ಇತ್ತಿಚೇಗೆ ನಡೆದ 10 ವರ್ಷದ ಬಾಲಕಿಯ ಕೊಲೆ ಪ್ರಕರಣದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ಹೊರಬಿದ್ದಿದೆ, ಹಾಗಾಗಿ ಮಳವಳ್ಳಿ ಪೊಲೀಸರು ಈ ಪ್ರಕರಣವನ್ನು ಪೋಕ್ಸೊ ಕಾಯ್ದೆಯಡಿ ದಾಖಲಿಸಿಕೊಂಡಿದ್ದಾರೆ.
ಬಾಲಕಿಯ ಶವ ಪರೀಕ್ಷೆಯ ವರದಿಯು ಇತ್ತಿಚೇಗೆ ಲಭಿಸಿದ್ದು, ವರದಿ ಅನ್ವಯ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ, ಅಂದು ಟ್ಯೂಷನ್ ಗೆಂದು ಬಾಲಕಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿ ಕಾಂತರಾಜು (50) ಸಮೀಪದಲ್ಲೆ ಇದ್ದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.
ನಂತರ ಈ ವಿಷಯವನ್ನು ಬಾಲಕಿ ಯಾರ ಬಳಿಯಾದರೂ ಬಾಯ್ಬಿಡಬಹುದು ಎಂಬ ಭಯದಿಂದ ಬಾಲಕಿಯನ್ನು ಸಂಪ್ ಗೆ ಹಾಕಿರುವುದಾಗಿ ಆರೋಪಿ ಕಾಂತರಾಜು ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ಈ ಕೃತ್ಯದ ನಂತರ ಆರೋಪಿ ತನಗೇನೂ ತಿಳಿದಿಲ್ಲ ಎಂಬಂತೆ ಬಾಲಕಿಯ ಪೋಷಕರ ಜೊತೆಯಲ್ಲೆ ಆಕೆಯನ್ನು ಹುಡುಕುವ ನಾಟಕವಾಡಿದ್ದ.
ಈ ಹಿಂದೆ ಕೇವಲ ಕೊಲೆ ಎಂದೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು, ಆದರೆ ವೈದ್ಯಕೀಯ ವರದಿಯಲ್ಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿರುವುದರಿಂದ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದ್ದಾರೆ.




