ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಗ್ರಾಮಸ್ಥರು ಹಾಗೂ ರೈತರ ವಿರೋಧದ ನಡುವೆಯೂ ಅಂಗಡಿ-ಮಳಿಗೆಗಳನ್ನು ತೆರವುಗೊಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂಡುವಾಳು ಗ್ರಾಮದ ನಾಲ್ಕು ವಾಣಿಜ್ಯ ಕಟ್ಟಡಗಳಿಗೆ ಪರಿಹಾರ ನೀಡದೆ ತಾರತಮ್ಯ ಮಾಡಿದ್ದು ಹೆಚ್ಚುವರಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕಳೆದ ಹಲವಾರು ವರ್ಷಗಳಿಂದ ಪತಿಹಾರ ನೀಡದ ಕಾರಣ ಕಟ್ಟಡಗಳನ್ನು ತೆರವುಗೊಳಿಸಿರಲಿಲ್ಲ.ಈ ವಿಚಾರವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕೆಲ ದಿನಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಪರಿಹಾರ ನೀಡುವಂತೆ ಆಗ್ರಹಿಸಿದ್ದರು.
ಹೆಚ್ಚುವರಿ ಪರಿಹಾರ ನೀಡುವ ಸಂಬಂಧ ಹಲವು ಬಾರಿ ಸಭೆಗಳು ನಡೆದರೂ ಯಾವುದೇ ತೀರ್ಮಾನಕ್ಕೆ ಬರಲಾಗಿರಲಿಲ್ಲ.
ಆದರೆ ಇಂದು ಬೆಳಿಗ್ಗೆ ಪೊಲೀಸರ ರಕ್ಷಣೆಯಲ್ಲಿ ಸ್ಥಳಕ್ಕೆ ಬಂದ ಹೆದ್ದಾರಿ ಅಧಿಕಾರಿಗಳು ಕಟ್ಟಡ ನೆಲಸಮಗೊಳಿಸಲು ಮುಂದಾದರು. ಆದರೆ ಅಂಗಡಿ ಮಳಿಗೆಗಳ ಮಾಲೀಕರು ಮತ್ತು ಗ್ರಾಮಸ್ಥರು ಪೊಲೀಸರ ಮತ್ತು ಹೆದ್ದಾರಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೆಚ್ಚುವರಿ ಪರಿಹಾರ ನೀಡುವವರೆಗೂ ನಮ್ಮ ಪ್ರಾಣ ಹೋದರೂ ಕಟ್ಟಡ ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಇಂಡುವಾಳ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ತಳ್ಳಾಟ-ನೂಕಾಟವೀ ನಡೆಯಿತು. ಪೊಲೀಸರು ತಾಲೂಕು ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಿದ್ದೇಗೌಡ ಹಾಗೂ ಇಂಡುವಾಳು ಬಸವರಾಜು ಅವರನ್ನು ಬಂಧಿಸಲು ಮುಂದಾದರು.
ಸಾರ್ವಜನಿಕರು ಮತ್ತು ರೈತರ ವಿರೋಧ ನಡುವೆಯೂ ಪೊಲೀಸರ ರಕ್ಷಣೆಯಲ್ಲಿ ರಾಷ್ಟೀಯ ಹೆದ್ದಾರಿ ಅಧಿಕಾರಿಗಳು ನಾಲ್ಕು ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದರು.




