Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯಕ್ಕೆ ನಾನ್ಯಾರು ಎಂದು ಕೇಳಲು ಅವರ್‍ಯಾರು ?

ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗಿ, ಒಂದು ಬಾರಿ ಅಧ್ಯಕ್ಷನಾಗಿದ್ದೇನೆ. ಮಂಡ್ಯ ತಾಲೂಕಿನ ಹಾಲು ಉತ್ಪಾದಕರ ಸಂಘದಿಂದ ಗೆದ್ದು ಮನ್ಮುಲ್ ಅಧ್ಯಕ್ಷನಾಗಿರುವ ನನ್ನನ್ನು ಮಂಡ್ಯ ಕ್ಷೇತ್ರಕ್ಕೆ ಯಾರು ಎಂದು ಕೇಳುವುದು ಸರಿಯಲ್ಲ ಎಂದು ಬಿ.ಆರ್.ರಾಮಚಂದ್ರು ತಿರುಗೇಟು ನೀಡಿದ್ದಾರೆ.

ಜಿ.ಪಂ‌ ಮಾಜಿ ಸದಸ್ಯ ಎಚ್.ಎನ್. ಯೋಗೇಶ್ ಅವರು, ರಾಮಚಂದ್ರು ನನಗೆ ಪ್ರತಿಸ್ಪರ್ಧಿ ಅಂದುಕೊಂಡಿಲ್ಲ. ಈ ಕ್ಷೇತ್ರಕ್ಕೆ ಅವರು ಯಾರು? ಕಳೆದ 7 ವರ್ಷದಿಂದ ಕ್ಷೇತ್ರದ ಜನರೊಂದಿಗೆ ಇರುವ ನಾನು ಈಗ 6 ತಿಂಗಳ ಹಿಂದೆ ಬಂದಿರುವ ರಾಮಚಂದ್ರು ಬಗ್ಗೆ ಏನು ಮಾತನಾಡಲಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು‌.

ಈ ಬಗ್ಗೆ ನುಡಿ ಕರ್ನಾಟಕ. ಕಾಮ್ ಜೊತೆ ಮಾತನಾಡಿದ ಬಿ.ಆರ್. ರಾಮಚಂದ್ರು, ನಾನು ಕಳೆದ 30 ವರ್ಷಗಳಿಂದ ಮಂಡ್ಯ ಕ್ಷೇತ್ರದ ಬಸರಾಳಿನಲ್ಲಿ ಅಂಗಡಿ ಇಟ್ಟುಕೊಂಡಿದ್ದೇನೆ. ಮಂಡ್ಯ ನಗರದ ಕಲ್ಲಹಳ್ಳಿಯ 6ನೇ ಕ್ರಾಸ್ ನಲ್ಲಿ ನನ್ನ ಮನೆ ಇದೆ. ಮಂಡ್ಯ ಕ್ಷೇತ್ರದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗೆದ್ದು ಅಧ್ಯಕ್ಷನಾಗಿದ್ದೇನೆ. ಹೀಗಿರುವಾಗ ನಾನು ಮಂಡ್ಯದವನಲ್ಲ ಎಂದು ಹೇಗೆ ಹೇಳುತ್ತಾರೆ.
ಯೋಗೇಶ್ ಅವರೇ ಹೇಳಿದಂತೆ ಅವರು ಕೇವಲ ಏಳು ವರ್ಷದಿಂದ ಮಂಡ್ಯ ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ ಅಷ್ಟೇ. ಆದರೆ ನಾನು ಜೆಡಿಎಸ್ ಪಕ್ಷದೊಂದಿಗೆ ಕಳೆದ 30 ವರ್ಷಗಳಿಂದ ಇದ್ದು, ಜನರೊಂದಿಗೆ ಒಡನಾಟ ಮಾಡಿದ್ದೇನೆ. ಅವರು ಈಗ ಏಳು ವರ್ಷದಿಂದ ಜನರೊಂದಿಗೆ ಇದ್ದಾರೆ ಎಂದು ರಾಮಚಂದ್ರು ಟಾಂಗ್ ನೀಡಿದ್ದಾರೆ.

ಜಿಲ್ಲಾಧ್ಯಕ್ಷ ಡಿ. ರಮೇಶ್ ಅವರ ಮನೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಗಳಾದ ನೀವೆಲ್ಲರೂ ಒಗ್ಗಟ್ಟಾಗಿರಬೇಕು. ಜನರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರು ಪಕ್ಷದ ಅಧಿಕೃತ ಅಭ್ಯರ್ಥಿ. ಅವರ ಪರವಾಗಿ ಉಳಿದ ಆಕಾಂಕ್ಷಿತರೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಪಕ್ಷ ನನಗೆ ಟಿಕೆಟ್ ನೀಡಿದರೆ, ಉಳಿದವರು ನನ್ನ ಪರವಾಗಿ ಕೆಲಸ ಮಾಡಲಿ. ನನಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರ ಮುಂದೆ ತಿಳಿಸಿದ್ದೇನೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ