Thursday, November 19, 2026

ಪ್ರಾಯೋಗಿಕ ಆವೃತ್ತಿ

‘ಕಮಲ’ದ ‘ಹೊರೆ’ ಇಳಿಸಿ, ಜನಪರ ಗ್ಯಾರಂಟಿಯ ‘ಕೈ’ ಹಿಡಿದ ಮತದಾರರು ; ಮೈತ್ರಿಗೆ ಮರ್ಮಾಘಾತ ನೀಡಿದ ಫಲಿತಾಂಶ

ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನ.13 ರಂದು ನಡೆದಿದ್ದ ಉಪ ಚುನಾವಣೆಯ ಫಲಿತಾಂಶ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಒಲಿದು ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವಕ್ಕೆ ಬಲ ತುಂಬಿದೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಇ. ತುಕರಾಂ ರಾಜೀನಾಮೆಯಿಂದ ತೆರವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಮರ್ಮಾಘಾತ ಉಂಟಾಗಿದೆ.

ಇಂದು ಪ್ರಕಟಗೊಂಡ ಉಪಚುನಾವಣಾ ಫಲಿತಾಂಶ ಎನ್ ಡಿ ಎ ಮೈತ್ರಿಗೆ ಭಾರೀ ಹಿನ್ನೆಡೆಯಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಸ್ವತಃ ತಮ್ಮ ಪುತ್ರರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದೇ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರ ಭದ್ರಕೋಟೆಯಾಗಿದ್ದರೆ, ಶಿಗ್ಗಾವಿಯು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿತ್ತು. ಎರಡು ಕ್ಷೇತ್ರಗಳ ಸೋಲಿನೊಟ್ಟಿಗೆ ನಿರೀಕ್ಷೆಯಂತೆಯೇ ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಜಯಶಾಲಿಯಾಗಿ ಅಧಿಕಾರರೂಢ ಪಕ್ಷಕ್ಕೆ ಬಲ ತುಂಬಿದ್ದಾರೆ.

ಚನ್ನಪಟ್ಟಣದಲ್ಲಿ ಆರಂಭಿಕ ಸುತ್ತುಗಳಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಅಲ್ಪ ಮುನ್ನಡೆ ಪಡೆದಿದ್ದರು. ಆದರೆ ಏಳನೇ ಸುತ್ತಿನ ಬಳಿಕ ತಮ್ಮ ಪ್ರಾಬಲ್ಯ ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಏಕಾಏಕಿ ಸುಮಾರು ನಾಲ್ಕು ಸಾವಿರದಷ್ಟು ಮುನ್ನಡೆ ಪಡೆದರು. ನಂತರದ ಸುತ್ತುಗಳಲ್ಲಿ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು. ಅಂತಿಮವಾಗಿ 1,12,642 ಮತಗಳನ್ನು ಪಡೆದು 25,413 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ 87,229 ಮತ ಪಡೆದು ಮೂರನೇ ಬಾರಿಗೆ ಪರಾಭವಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜೀನಾಮೆಯಿಂದ ತೆರವಾಗಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್ ಬೊಮ್ಮಾಯಿ ಅವರ ಗೆಲುವು ಶತಸಿದ್ದ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿರುವ ಮತದಾರ ಕಳೆದ 25 ವರ್ಷಗಳ ಬೊಮ್ಮಾಯಿ ಕುಟುಂಬದ ಪಾರುಪತ್ಯಕ್ಕೆ ಅಂತ್ಯವಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಯಾಸೀರ್ ಅಹಮದ್ ಖಾನ್ 1,00,756 ಮತ ಪಡೆದು 13448 ಮತಗಳ ಅಂತರದಿಂದ ಚೊಚ್ಚಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 87,308 ಮತ ಪಡೆದು ಪ್ರಥಮ ಪ್ರಯತ್ನದಲ್ಲೇ ಸೋಲು ಕಂಡಿದ್ದಾರೆ.

ಬಳ್ಳಾರಿಯ ಸಂಡೂರು ಕ್ಷೇತ್ರ ಈ ಹಿಂದೆಯೂ ಕಾಂಗ್ರೆಸ್ ವಶದಲ್ಲಿತ್ತು. ಪ್ರಸ್ತುತ ಸಂಸದರಾಗಿರುವ ಇ ತುಕರಾಂ ರಾಜೀನಾಮೆಯಿಂದ ತೆರವಾಗಿರುವ ಸದರಿ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಪ್ರಾಬಲ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ತುಕರಾಂ ಧರ್ಮಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕೀಳಿಸಿ ವಿಜಯಮಾಲೆ ದಕ್ಕಿಸಿಕೊಂಡಿದ್ದಾರೆ.

ವಿಜೇತ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು 93,616 ಮತಗಳಿಸಿ 9,649 ಮತಗಳ ಅಂತರದಿಂದ ಪ್ರಥಮ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 83,967 ಮತಗಳಿಸಿ ಪರಾಭವಗೊಂಡಿದ್ದಾರೆ. ಆ ಮೂಲಕ ಗಣಿ ಧಣಿ ಜನಾರ್ಧನ ರೆಡ್ಡಿ ನಿರೀಕ್ಷೆಗೆ ಭಂಗ ತಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಬ್ಬರೂ ಉಪ ಚುನಾವಣಾ ಕದನದಲ್ಲಿ ಹಿನ್ನಡೆ ಸೋಲು ಅನುಭವಿಸಿದ್ದಾರೆ. ಚನ್ನಪಟ್ಟಣವು ಎಚ್‌ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಶಿಗ್ಘಾಂವಿಯಲ್ಲಿ ಮಗನನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಬಸವರಾಜ ಬೊಮ್ಮಾಯಿ ಅವರ ಮೇಲಿತ್ತು. ಆದರೆ ಅವರಿಬ್ಬರಿಗೂ ಮತದಾರ ಪ್ರಭು ಬೆನ್ನು ತೋರಿದ್ದಾನೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ