ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಹಂತ ಹಂತವಾಗಿ ಕುಸಿಯುತ್ತಿದ್ದು, ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಅಂದೋರು ಯಾರು? ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವ್ಯಂಗ್ಯವಾಡಿದರು.
ಮದ್ದೂರು ತಾಲ್ಲೂಕಿನ ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಕೊಪ್ಪ, ಬಿದರಕೋಟೆ, ಬಳ್ಳೆಕೆರೆ, ಚೊಟ್ಟನಹಳ್ಳಿ, ಹುರಗಲವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ಜನ ಸಂಪರ್ಕ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಏಳು ಜೆಡಿಎಸ್ ಶಾಸಕರಿದ್ದರೂ ನಿಖಿಲ್ ಕುಮಾರ್ ಸ್ವಾಮಿಯನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಏಕೆ ಸಾಧ್ಯವಾಗಲಿಲ್ಲ ? ಎರಡು ವಿಧಾನ ಪರಿಷತ್ ಚುನಾವಣೆಗಳಲ್ಲಿ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲೂ ಜೆಡಿಎಸ್ ಭದ್ರಕೋಟೆ ಭೇದಿಸಿ ಗೆಲುವು ಸಾಧಿಸುವುದು ನನ್ನ ಗುರಿ ಎಂದು ಹೇಳಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವರು ನನ್ನ ಪ್ರಾಡೆಕ್ಟ್ ಗಳೇ, ತಮ್ಮ ಕೆಲಸಕ್ಕಾಗಿ ಅಲ್ಲಿಗೆ ಹೋಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನನ್ನನ್ನು ಕೇವಲ 5 ತಿಂಗಳಿಗಷ್ಟೇ ಸಂಸದರನ್ನಾಗಿ ಮಾಡಿ ಮನೆಗೆ ಕಳುಹಿಸಿದರು. ನನ್ನ ಬೆಂಬಲಿಗರು, ಹಿತೈಷಿಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದೇನೆ. ನಾನು ಭೇಟಿ ನೀಡುತ್ತಿರುವ ಗ್ರಾಮಗಳಲ್ಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಕಳೆದ ಭಾನುವಾರ ಕಾಫಿ ಕುಡಿಯಲೆಂದು ಹೋಟೆಲ್‌ಗೆ ತೆರಳಿದ್ದೆ. ಅದೇ ಹೋಟೆಲ್‌ಗೆ ಬಂದ ಫೈಟರ್ ರವಿ ಅವರನ್ನು ಕಂಡು ಉಭಯ ಕುಶಲೋಪರಿ ವಿಚಾರಿಸಿದೆ ಅಷ್ಟೆ. ಆದರೆ, ರಾಜಕೀಯವಾಗಿ ಯಾವುದೇ ಚರ್ಚೆ ನಡೆಸಲಿಲ್ಲ ಎಂದು ತಿಳಿಸಿದರು.




