ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಮಂಡ್ಯ ತಾಲೂಕು ಆಲಕೆರೆ ಗ್ರಾಮ ಪಂಚಾಯಿತಿಯ ಮುದ್ದುಂಗೆರೆ ಗ್ರಾಮದಲ್ಲಿ 151 ಮನೆಗಳ ಸಮೀಕ್ಷೆ ನಡೆಸಿ, ಸರ್ಕಾರದ ವಿವಿಧ ಸಾಮಾಜಿಕ ಸೌಲಭ್ಯ ವಂಚಿತರ ಮಾಹಿತಿ ಸಂಗ್ರಹಿಸಿದರು.
ಮುದ್ದುಂಗೆರೆ ಗ್ರಾಮದಲಿ ರಾಷ್ಟ್ರೀಯ ಸೇವಾ ಯೋಜನೆ ಪದವಿ ಘಟಕಗಳು, ಮಹಿಳಾ ಸರ್ಕಾರಿ ಕಾಲೇಜು, ಸಾಯತ್ತ, ಮಂಡ್ಯ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಂಡ್ಯ ಇವರು ಆಯೋಜಿಸಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ 2022 -23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗ್ರಾಮದ ಮುಖಂಡ ಮುತ್ತುರಾಜು ಎಂ.ಸಿ. ಧ್ವಜಾರೋಹಣ ನೆರವೇರಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಮೊದಲಾದ ಪಿಂಚಣಿ ಸೌಲಭ್ಯಗಳು, ಭೂ ದಾಖಲೆಗಳಿಗೆ ಸಂಬಂಧಿಸಿದಂತಹ ವ್ಯಾಜ್ಯಗಳು, ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಕೌಂಟ್, ಬ್ಯಾಂಕ್ ವಿಮಾ ಸೌಲಭ್ಯಗಳನ್ನು ಕುರಿತು ಅರಿವು ಮೂಡಿಸಿ ಸೌಲಭ್ಯಗಳಿಲ್ಲದವರ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗಳಿಂದ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಕೊಡಿಸಲು ಅಂಕಿ -ಅಂಶಗಳನ್ನು ದಾಖಲಿಸಿಕೊಳ್ಳಲಾಯಿತು.
ಉಪನ್ಯಾಸ ಕಾರ್ಯಕ್ರಮದಲ್ಲಿ ಜಿ.ಎನ್.ಕೆಂಪರಾಜು ಅವರು ನಡೆಸಿಕೊಟ್ಟು ಗ್ರಾಮಸ್ಥರಲ್ಲಿ ಪರಿಸರ ,ನೀರು, ಆರೋಗ್ಯ ಮೊದಲಾದ ವಿವಿಧ ವಿಚಾರಗಳಲ್ಲಿ ಹೊಂದಿರಬೇಕಾದ ಜಾಗೃತಿ ಕುರಿತು ತಿಳಿಸಿಕೊಟ್ಟರು. ಗ್ರಾಮದ ಮುಖಂಡ ಎಂ.ಸಿ.ನಾರಾಯಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರೆ, ಎಂ.ಸಿ.ಪೋತರಾಜು ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೈಸೂರಿನ ಸಿದ್ದಪ್ಪ ಮತ್ತು ತಂಡದ ಮೂಡಲ ಮನೆ ಜಾನಪದ ಕಲಾಬಳಗದವರು ಹಾಗೂ ಶಿಬಿರಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಡಾ.ಕೆಂಪಮ್ಮ ಶಿವರಾಜು, ಎಚ್.ಎಸ್.ಸಂದೀಪ್, ಮಿಮ್ಸ್ ನ ಚಂದನ್ ಭಾಗವಹಿಸಿದ್ದರು




