Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳೆ ಹಿನ್ನಲೆ:ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಜನ-ಜಾನುವಾರುಗಳು ಪರಿತಪಿಸುತ್ತಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ತಾಕೀತು ಮಾಡಿದರು.

ಮಂಡ್ಯದ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳು ತುರ್ತು ಭೇಟಿ ನೀಡಿ ಅಗತ್ಯ ನೆರವು ಒದಗಿಸಲು ಮುಂದಾಗಬೇಕು.ಇನ್ನೂ ಮೂರು ದಿನ ಮಳೆ ಬರುವ ಸೂಚನೆಯಿರುವುದಿಂದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ರಜೆ ಹಾಕದೆ, ಕಾರ್ಯ ನಿರ್ವಹಿಸಬೇಕು. ಮುಖ್ಯಮಂತ್ರಿಗಳು ಅನಿರೀಕ್ಷಿತ ಭೇಟಿ ನೀಡುವ ಸಂಭವವಿದ್ದು, ಕಾರ್ಯಕ್ಷಮತೆಯಿಂದ ಕರ್ತವ್ಯ ನಿರ್ವಹಿಸದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಮಳೆಹಾನಿ ಪ್ರದೇಶದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.ನಾವೇ ಅವರಿಗೆ ಮಳೆಹಾನಿ ಪ್ರದೇಶಗಳಿಗೆ ಹೋಗಿ ನೋಡಿ ವರದಿ ಮಾಡಿ ಎನ್ನಬೇಕು.ಅವರಾಗೇ ಹೋಗುತ್ತಿಲ್ಲ. ಅಲ್ಲದೆ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಾರೆ.

ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದರೂ, ದುರಸ್ತಿಗೆ ಮುಂದಾಗದೇ ಟೆಂಡರ್ ನೆಪ ಹೇಳುತ್ತಾರೆ. ಗ್ರಾಮ ಲೆಕ್ಕಾಧಿಕಾರಿ, ಶಿರಸ್ತೆದಾರ್ ಹಾಗೂ ಪಿಡಿಒಗಳು ಕೇಂದ್ರ ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ಅಸಮಾಧಾನ ಹೊರಹಾಕಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಮಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲು ತಿಂಗಳ ಅಂತ್ಯದವರೆಗೂ ಅವಕಾಶವಿದ್ದರೂ ಅಧಿಕಾರಿಗಳು ಅದನ್ನು ಸಮಪರ್ಕವಾಗಿ ಮಾಡುತ್ತಿಲ್ಲ. ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಹಾಗೂ ಇಂಡುವಾಳು ಗ್ರಾಮ ಪಂಚಾಯಿತಿಯ ಪಿಡಿಒಗಳು ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇವರ ಮೇಲೆ ಕ್ರಮ ವಹಿಸಬೇಕೆಂದು ಸಿಇಒ ಶಾಂತ ಹುಲ್ಮನಿ ಅವರಿಗೆ ಸೂಚಿಸಿದರು.

ಅಂತಿಮವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಕಂದಾಯ, ಕೃಷಿ, ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹೊಣೆಗಾರಿಕೆ ಅರಿತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ದಸರಾ ವೇಳೆಗೆ ಕೆ ಆರ್ ಎಸ್ ರಸ್ತೆ ಡಾಂಬರೀಕರಣ

ದಸರಾ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳು ಹಾಗೂ ಕೃಷ್ಣರಾಜ ಸಾಗರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್. ರಸ್ತೆ ಡಾಂಬರೀಕರಣಕ್ಕೆ ತುರ್ತು ಕ್ರಮ ವಹಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.

ಈ ರಸ್ತೆಯಲ್ಲಿ ಗುಂಡಿಗಳು ಸಾಕಷ್ಟಿದ್ದು ವಾಹನ ಸಂಚಾರ ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಜನಸಂದಣಿ ಹಾಗೂ ವಾಹನ ಸಂಚಾರವಿರುತ್ತದೆ. ದಸರಾ ವೇಳೆಗೆ ಗುಣಮಟ್ಟದ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕು. ಆತುರದ ಕಾಮಗಾರಿ ಸರಿಯಲ್ಲ. ಟೆಂಡರ್ ಹೆಸರಿನಲ್ಲಿ ವಿಳಂಬ ಮಾಡಿದರೆ ಪ್ರವಾಸಿಗರು ಕಿರಿಕಿರಿ ಅನುಭವಿಸಬೇಕಾಗುತ್ತದೆ ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸಲಹೆ ನೀಡಿದರು.

ಮಧ್ಯೆ ಪ್ರವೇಶಿಸಿದ ಉಸ್ತುವಾರಿ ಸಚಿವರು ಕೂಡಲೇ ಕ್ರಮ ವಹಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ