ವಿಶ್ವಕರ್ಮ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಅಭಿವೃದ್ಧಿಗಾಗಿ ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ವಿಶ್ವಕರ್ಮ ಮಹಾಸಭಾದ ಯುವ ಘಟಕದ ಅಧ್ಯಕ್ಷ ತೈಲೂರು ಆನಂದಚಾರಿ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಜನಸಂಖ್ಯೆ ಇದೆ, ರಾಜ್ಯಾದ್ಯಂತ ಸುಮಾರು 45 ಲಕ್ಷ ಜನಸಂಖ್ಯೆ ಇದೆ, ವಿಶ್ವಕರ್ಮರಿಂದ ನಿರಂತರ ಹೋರಾಟ ನಡೆಯುತ್ತಿದೆ. ನಾಯಕ ಕೆ.ಪಿ ನಂಜುಂಡಿ ವಿಶ್ವಕರ್ಮ ಅವರ ಆದೇಶದಂತೆ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕು, ಹೋಬಳಿಯ ಗ್ರಾಮಗಳಲ್ಲಿ ಗ್ರಾಮ ಘಟಕಗಳನ್ನು ಮಾಡಿ ವಿಶ್ವಕರ್ಮ ಮಹಾಸಭಾ ಸಂಘಟನೆಯನ್ನು ಬಲಿಷ್ಠಗೊಳಿಸಬೇಕಿದೆ ಎಂದರು.
ಕರ್ನಾಟಕ ರಾಜ್ಯದ ಎಲ್ಲಾ ವಿಶ್ವಕರ್ಮರು ಒಗ್ಗಟ್ಟಿನಿಂದ ಸಂಘಟನೆ ಮಾಡಿ ನಮ್ಮ ನಾಯಕರ ಕೈ ಬಲಪಡಿಸಬೇಕಿದೆ. ನರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ರಾಜ್ಯದ 745 ಹೊಬಳಿ ಹಾಗೂ 114 ತಾಲ್ಲೂಕು, 31 ಜಿಲ್ಲೆಗಳಿಗೂ ಭೇಟಿ ಕೊಟ್ಟು ಸ್ವ ಜಾಗೃತಿಗೊಳಿಸಲಿದ್ದಾರೆ. ಈಗಾಗಲೇ 92 ಹೋಬಳಿಯ ಜಾಗೃತಿ ಸಭೆಗಳನ್ನ ಮಾಡಿದ್ದಾರೆ. ಎಲ್ಲಾ ಹೋಬಳಿಗಳಿಗೆ ಸ್ವತಃ ತಾವೇ బంದು ಎಲ್ಲಾ ವಿಶ್ವಕರ್ಮ ಸಮಾಜದ ಬಂಧುಗಳನ್ನು ಜಾಗೃತಿಗೊಳಿಸಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಬೀದರ್ ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಎಸ್.ಟಿ. ಮೀಸಲಾತಿ ಪಡೆಯಲು ಸರ್ಕಾರವನ್ನು ಒತ್ತಾಯಿಸಲು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ದೊಡ್ಡ ಕಾರ್ಯಕ್ರಮ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆ ತಾಲ್ಲೂಕು ಮುಖಂಡರು ಆಸಕ್ತಿಯಿಂದ ಮಹಾಸಭಾ ಪಧಾಧಿಕಾರಿಗಳನ್ನು ಮಾಡಿ, ಸಂಘಟನೆಯನ್ನ ಚುರುಕುಗೊಳಿಸಬೇಕು ಎಂದರು.
ಗೋಷ್ಠಿಯಲ್ಲಿ ಮದ್ದೂರು ಬಸವಾಚಾರಿ, ಕೊತ್ತತ್ತಿ ರಘು, ಪಾಂಡವಪುರ ಮೋಹನ್ ಹಾಗೂ ಕೆ.ಎಂ.ದೊಡ್ಡಿ ರವಿ ಪ್ರಸಾದ್ ಉಪಸ್ಥಿತರಿದ್ದರು.




