Thursday, November 19, 2026

ಪ್ರಾಯೋಗಿಕ ಆವೃತ್ತಿ

ಕನ್ನಡ ಭಾಶಾ ಬೋಧನೆ, ಕಲಿಕೆ ಮತ್ತು ಸಡಿಲವಾಗಿರುವ ಕನ್ನಡದ ಬೇರುಗಳು

ರಂಗನಾಥ ಕಂಟನಕುಂಟೆ. ಸಾಹಿತಿಗಳು ಮತ್ತು ಪ್ರಗತಿಪರ ಲೇಖಕರು


  • ಬ್ರಿಟಿಶ್ ವಸಾಹತುಶಾಹಿ ಆಡಳಿತ ಕಾಲದಲ್ಲಿ ಶಿಕ್ಶಣವು ಮೇಲ್ವರ್ಗದವರ ಆಡುಂಬೊಲದ ಕ್ಶೇತ್ರವಾಗಿತ್ತು.
  • ಇತ್ತೀಚೆಗೆ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ‘ರಾಷ್ಟ್ರೀಯ ಶಿಕ್ಶಣ ನೀತಿ-2020’ ಇದರ ಭಾಗವೇ ಆಗಿದೆ.
  • ಅಧ್ಯಾಪಕರ ಮತ್ತು ಆಡಳಿತಗಾರರ ಹೊಣೆಗೇಡಿತನಗಳೇ ಕಾರಣ

ಹಿಂದಣ ಕಾಲಕ್ಕಿಂತಲೂ ಇಂದು ಶಿಕ್ಶಣಕ್ಕೆ ಹೆಚ್ಚು ಬೇಡಿಕೆಯಿದೆ. ಸಾಮಾಜಿಕ ಜೀವನದಲ್ಲಿ ಏಳ್ಗೆ ಹೊಂದಲು ಜನರು ಶಿಕ್ಶಣವನ್ನು ಬಯಸುತ್ತಿದ್ದಾರೆ. ಬ್ರಿಟಿಶ್ ವಸಾಹತುಶಾಹಿ ಆಡಳಿತ ಕಾಲದಲ್ಲಿ ಶಿಕ್ಶಣವು ಮೇಲ್ವರ್ಗದವರ ಆಡುಂಬೊಲದ ಕ್ಶೇತ್ರವಾಗಿತ್ತು. ಅದಕ್ಕೂ ಮೊದಲು ರಾಜಪ್ರಭುತ್ವದ ಕಾಲದಲ್ಲಿಯೂ ಇದು ಕೆಲರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಶಿಕ್ಶಣವು ಎಲ್ಲರ ಅಗತ್ಯವಾಗಿದೆ. ಎಲ್ಲರಿಗೂ ಕಡ್ಡಾಯ ಶಿಕ್ಶಣ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸರ್ಕಾರವೇ ಶಾಲೆಗಳನ್ನು ಆರಂಭಿಸುವುದು; ಇಲ್ಲವೇ ಖಾಸಗಿಯವರಿಗೆ ಅನುದಾನ ನೀಡುವುದು ಅಥವಾ ಅನುದಾನೇತರ ಶಿಕ್ಶಣ ಸಂಸ್ಥೆಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡುವುದು ನಡೆದಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 21/ಎ ವಿಧಿಯನ್ನು ಸೇರಿಸುವ ಮೂಲಕ 6ರಿಂದ 14 ವರ್ಶಗಳ ವಯೋಮಾನದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಶಣವನ್ನು ನೀಡಲು ಆಶಿಸಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಇದನ್ನು ಗಮನಿಸಿದರೆ ಆಧುನಿಕ ಕಾಲದಲ್ಲಿ ಶಿಕ್ಶಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ತಿಳಿಯುತ್ತದೆ.

ಇದೇ ವೇಳೆಯಲ್ಲಿ ಎಲ್ಲ ಜಾತಿಗಳ ಎಲ್ಲ ವರ್ಗಗಳ ಎಲ್ಲ ಪ್ರದೇಶಗಳ ಜನರು ಮಕ್ಕಳಿಗೆ ಶಿಕ್ಶಣ ಕೊಡಿಸಲು ಆಸಕ್ತಿ ತಾಳಿದ್ದಾರೆ. ಈ ಪರಿಸ್ಥಿತಿ ಕಳೆದ ಅಯ್ವತ್ತು ವರ್ಶಗಳ ಹಿಂದೆ ಇರಲಿಲ್ಲ. ವಂಶಪಾರಂಪರಿಕ ಕುಲಕಸುಬುಗಳಾದ ಕೃಶಿ, ಪಶುಪಾಲನೆ, ಬಡಗಿ, ನೇಕಾರಿಕೆ, ಕುಂಬಾರಿಕೆ, ಚಮ್ಮಾರಿಕೆ ಮುಂತಾದ ಕೆಲಸಗಳನ್ನು ಮಾಡುತ್ತ ಜೀವನ ಸಾಗಿಸುವುದು ಅವರ ನಡೆಯಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕುಲಕಸುಬುಗಳ ತಳಹದಿಯೇ ಚಿದ್ರವಾಗಿದೆ. ಅವುಗಳನ್ನು ನಂಬಿ ಬದುಕಲು ಸಾಧ್ಯವಿಲ್ಲ ಎನ್ನಿಸಿದೆ. ಅವುಗಳನ್ನು ಮುಂದುವರಿಸಿದರೂ ಶಿಕ್ಶಣ ಬೇಕೆ ಬೇಕು ಅನ್ನಿಸಿದೆ. ಹಾಗಾಗಿ ಎಲ್ಲರಿಗೂ ಶಿಕ್ಶಣ ಅತ್ಯಗತ್ಯ ಎನ್ನಿಸಿದೆ. ಅದು ಮೂಲಭೂತ ಹಕ್ಕಾಗಿದೆ. ಅದರ ಮೂಲಕ ಸಾಮಾಜಿಕ ಏಳ್ಗೆ ಸಾಧ್ಯ ಎನ್ನಿಸಿದೆ. ಇದಕ್ಕೆ ವ್ಯಕ್ತಿಗತವಾದ ಸಾವಿರಾರು ಯಶಸ್ವಿ ಉದಾಹರಣೆಗಳೂ ಇವೆ. ಆದ್ದರಿಂದ ಶಿಕ್ಶಣ ಕಲ್ಪಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು ತನ್ನ ಕರ್ತವ್ಯವೆಂದು ಸರ್ಕಾರ ಭಾವಿಸಿದೆ. ಶಿಕ್ಶಣ ವಿಸ್ತರಣೆಯ ಯೋಜನೆಯಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶವನ್ನು ಖಾಸಗಿಯವರಿಗೂ ನೀಡಲಾಗಿದೆ. ಇದೇ ಹೊತ್ತಿನಲ್ಲಿ ಶಿಕ್ಶಣವನ್ನು ಒಂದು ಸರಕಾಗಿಸಿ ಅದನ್ನು ಮಾರಾಟ ಮಾಡಲಾಗುತ್ತಿದೆ. ಇದೇ ಬೇರೆಯದೇ ಚರ್ಚೆ.

ಹೀಗೆ ಎಲ್ಲರದಾಗಿ ಬಿಂಬಿತವಾಗಿರುವ ಶಿಕ್ಶಣ ಬಂಡವಾಳ ಹೂಡುವ ಉದ್ಯಮ ಕ್ಶೇತ್ರವೂ ಆಗಿದೆ. ಈ ಹಿಂದೆ ಅದನ್ನು ಅನುತ್ಪಾದಕ ವಲಯವೆಂದು ಭಾವಿಸಲಾಗಿತ್ತು. ಆದರೆ ಇಂದು ಅದನ್ನು ಲಾಭದಾಯಕ ಕ್ಶೇತ್ರವನ್ನಾಗಿಸಲಾಗಿದೆ. ಅದರ ಮೇಲುಸ್ತುವಾರಿಯನ್ನು ಸರ್ಕಾರಗಳು ನೋಡಿಕೊಳ್ಳುತ್ತವೆ. ಇದುವರೆಗೆ ಸರ್ಕಾರಗಳು ಶಿಕ್ಶಣಕ್ಕೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ನುಡಿ ನೀತಿಗಳು, ಶಿಕ್ಶಣ ನೀತಿಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇತ್ತೀಚೆಗೆ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ‘ರಾಷ್ಟ್ರೀಯ ಶಿಕ್ಶಣ ನೀತಿ-2020’ ಇದರ ಭಾಗವೇ ಆಗಿದೆ. ಈ ಮೊದಲೂ 1968, 1986ರಲ್ಲಿಯೂ ಶಿಕ್ಶಣ ನೀತಿಗಳನ್ನು ಒಕ್ಕೂಟ ಸರ್ಕಾರ ಜಾರಿಗೆ ತಂದಿತ್ತು. ಇಂತಹ ನೀತಿಗಳಿಗೆ ಅನುಗುಣವಾಗಿಯೇ ತ್ರಿಭಾಶಾ ನೀತಿಯನ್ನೂ ಜಾರಿಗೆ ತರಲಾಗಿದೆ. ಅಂದರೆ ಶಿಕ್ಶಣದ ನೀತಿಗಳು, ನುಡಿನೀತಿಗಳನ್ನು ರೂಪಿಸುವುದು ಮತ್ತು ಅವುಗಳನ್ನು ಜಾರಿಗೆ ತರುವುದು ಸರ್ಕಾರದ ಕೆಲಸವಾಗಿದೆ.

ಸರ್ಕಾರಗಳು ರೂಪಿಸುವ ಈ ನೀತಿಗಳು ಮಕ್ಕಳ ಕಲಿಕೆಗೆ ಬೇಕಾದ ರಾಶ್ಟ್ರೀಯ ಪಠ್ಯಕ್ರಮ(ಕರಿಕುಲಮ್), ಪಠ್ಯಗಳು(ಸಿಲೆಬಸ್) ಮತ್ತು ಬೋಧನಾ ಕ್ರಮವನ್ನು ರೂಪಿಸುತ್ತವೆ. ಪಠ್ಯಕ್ರಮದಲ್ಲಿ ವಿವಿಧ ವಿಶಯಗಳ ಜೊತೆಗೆ ಭಾಶೆಗಳೂ ಸೇರಿವೆ. ಇಲ್ಲಿ ಇತರೆ ವಿಶಯಗಳಿಗಿಂತಲೂ ಭಾಶೆಗಳ ಕಲಿಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಪೂರ್ವಪ್ರಾಥಮಿಕ ಶಿಕ್ಶಣದ ಹಂತದಿಂದ ಪದವಿ ಹಂತದ ಶಿಕ್ಶಣದವರೆಗೂ ಭಾಶೆಗಳನ್ನು ಕಲಿಸಲಾಗುತ್ತಿದೆ. ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಶಯಗಳನ್ನು ಬೇರೆ ಬೇರೆ ವಯೋಮಾನದಲ್ಲಿ ಕಲಿಸಲಾಗುತ್ತದೆ. ಆದರೆ ಭಾಶೆಗಳನ್ನು ಮಾತ್ರ ಪೂರ್ವಪ್ರಾಥಮಿಕ ಶಿಕ್ಶಣದ ಹಂತದಿಂದಲೂ ಕಲಿಸಲಾಗುತ್ತದೆ. ಹೀಗೆ ಪೂರ್ವಪ್ರಾಥಮಿಕ ಶಿಕ್ಶಣದ ಹಂತದಿಂದ ಭಾಶೆಗಳನ್ನು ಕಲಿಸುತ್ತಿದ್ದರೂ ಇಂದಿನ ಮಕ್ಕಳ ನುಡಿ ಕಲಿಕೆಯ ಗುಣಮಟ್ಟ ತೃಪ್ತಿಕರವಾಗಿಲ್ಲ. ಭಾಶೆಯ ಕೌಶಲಗಳಾದ ಓದು ಮತ್ತು ಬರೆಹಗಳೇ ರೂಢಿಯಾಗಿರುವುದಿಲ್ಲ. ಇದರಿಂದ ಭಾಶೆಯನ್ನು ತಮ್ಮ ಅಭಿವ್ಯಕ್ತಿಗೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಸರಳ ಕನ್ನಡ ವಾಕ್ಯವನ್ನು ಬರೆಯಲಾಗದ ಸ್ಥಿತಿಯಿದೆ. ಇತ್ತೀಚೆಗೆ ಇದರ ಪ್ರಮಾಣ ಹೆಚ್ಚುತ್ತಲೇ ಇದೆ. ಕನ್ನಡವನ್ನು ತಾಯ್ನುಡಿಯಾಗಿ ಹೊಂದಿರುವ ಮಕ್ಕಳ ಕನ್ನಡ ಕಲಿಕೆಯ ಗುಣಮಟ್ಟವೂ ಉತ್ತಮವಾಗಿಲ್ಲ. ಇದಕ್ಕೆ ಕಾರಣಗಳೇನು? ಬೋಧನೆ-ಮೌಲ್ಯಮಾಪನ ವಿಧಾನದಲ್ಲಿನ ದೋಶವೇ? ಪಠ್ಯಕ್ರಮದಲ್ಲಿನ ದೋಶವೇ? ಕಲಿಯುವವರ ಸಮಸ್ಯೆಯೇ? ಎಂಬ ಹಲವು ಕೇಳ್ವಿಗಳನ್ನು ಕೇಳಿಕೊಳ್ಳಬೇಕಿದೆ.

ಭಾಶಾ ಬೋಧನೆ ಮತ್ತು ನುಡಿ ಕಲಿಕೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಿಕ್ಶಣ, ಪದವಿ ಪೂರ್ವ ಮತ್ತು ಪದವಿ ಶಿಕ್ಶಣದ ವಿವಿಧ ಹಂತಗಳಲ್ಲಿ ನಡೆಯುತ್ತದೆ. ಇದು ಇತ್ತೀಚಿನ ವರ್ಶಗಳಲ್ಲಿ ಪೂರ್ವಪ್ರಾಥಮಿಕ ಹಂತಕ್ಕೆ ಇಳಿದಿದೆ. ಒಟ್ಟು ಹದಿನೇಳು ವರ್ಶಗಳ ಕಾಲ ನುಡಿ ಕಲಿಕೆ ನಡೆಯುತ್ತಿದೆ. ಅನೌಪಚಾರಿಕವಾಗಿ ನಡೆಯುತ್ತಿದ್ದ ಕಲಿಕೆಯನ್ನು ಈಚೆಗೆ ಅಧಿಕೃತಗೊಳಿಸಿ ಅದನ್ನು ಪೂರ್ವಪ್ರಾಥಮಿಕ ಶಿಕ್ಶಣವಾಗಿ ಪರಿಗಣಿಸಲಾಗುತ್ತಿದೆ. ಅಂದರೆ ಮಗು ಮೂರು ವರ್ಶ ಪೂರೈಸಿದ ಕೂಡಲೇ ಪೂರ್ವಪ್ರಾಥಮಿಕ ಶಾಲೆಗಳಿಗೆ ಸೇರಿಸಲಾಗುತ್ತದೆ. ಅಲ್ಲಿ ಪಠ್ಯದ ಹೊರತಾದ ಚಟುವಟಿಕೆಗಳ ಜೊತೆಗೆ ಮಗುವಿಗೆ ಅಕ್ಶರಾಭ್ಯಾಸ ಮಾಡಿಸಲಾಗುತ್ತದೆ. ಅಂದರೆ ಈ ಹಂತದಿಂದಲೇ ಭಾಶಾ ಕೌಶಲಗಳನ್ನು ಕಲಿಸಲಾಗುತ್ತಿದೆ.

ಈ ಪದ್ದತಿಯನ್ನು ಖಾಸಗಿ ಶಾಲೆಗಳು ಅಳವಡಿಸಿಕೊಂಡಿದ್ದು ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿಲ್ಲ. ಇದನ್ನು ಸರ್ಕಾರಿ ಶಾಲೆಗಳಲ್ಲಿಯೂ ಆರಂಭಿಸಬೇಕೆಂಬ ಒತ್ತಡವಿದೆ. ಸದ್ಯ ಸರ್ಕಾರಿ ಶಾಲೆಗಳ ಮಕ್ಕಳು ಆರು ವರ್ಶ ಪೂರೈಸಿದ ನಂತರ ಒಂದನೇ ತರಗತಿಗೆ ಸೇರುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವೆ ಅಂತರವನ್ನು ಸೃಶ್ಟಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳು ಪೂರ್ವಪ್ರಾಥಮಿಕ ಶಿಕ್ಶಣದಲ್ಲಿ ಅಕ್ಶರ ಬರೆಯುವುದು ಮತ್ತು ಓದುವುದನ್ನು ಕಲಿತವರಾಗುತ್ತಾರೆ. ಆರನೇ ವಯಸ್ಸಿಗೆ ಮೂರು ವರ್ಶಗಳ ಶಿಕ್ಶಣವನ್ನು ಖಾಸಗಿ ಶಾಲೆಗಳ ಮಕ್ಕಳು ಪೂರೈಸಿರುತ್ತಾರೆ. ಇದರಿಂದ ಕಲಿಕೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವೆ ಒಂದು ಅಂತರ ಸೃಶ್ಟಿಯಾಗುತ್ತದೆ. ಹಾಗೆಂದು ಖಾಸಗಿ ಶಾಲೆಗಳ ಎಲ್ಲ ಮಕ್ಕಳು ಅತ್ಯುತ್ತಮವಾಗಿ ಕಲಿತಿರುತ್ತಾರೆ ಎಂದಲ್ಲ. ಅಲ್ಲಿಯೂ ಕಲಿಕೆಯಲ್ಲಿ ಹಿಂದಿರುವ ಮಕ್ಕಳಿರುತ್ತಾರೆ. ಇಲ್ಲಿ ಅದರ ಬಗೆಗೆ ಚರ್ಚಿಸುವುದಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಯಲ್ಲಿನ ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅದಕ್ಕೆ ಕಾರಣವಾಗಿರುವ ಕೆಲವು ಸಂಗತಿಗಳನ್ನು ಚರ್ಚಿಸಲಾಗುವುದು.

ಮೇಲೆ ಹೇಳಿದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಒಂದನೆಯ ತರಗತಿಯಿಂದ ಅಕ್ಶರಾಭ್ಯಾಸ ಮಾಡಿಸಲಾಗುತ್ತದೆ. ‘ನಲಿಕಲಿ’ ವಿಧಾನದ ಮೂಲಕ ಅಕ್ಶರಗಳನ್ನು ಪರಿಚಯಿಸಿ ಓದಿಸಿ ಬರೆಸುವ ಕೆಲಸ ಮಾಡಲಾಗುತ್ತದೆ. ಈ ಹಂತದಲ್ಲಿ ಎಲ್ಲ ಮಕ್ಕಳ ಕಲಿಕೆಯ ವೇಗ ಒಂದೇ ರೀತಿಯಲ್ಲಿ ಇರುವುದಿಲ್ಲ. ಶಾಲೆಗಳಿಗೆ ಬರುವ ಮಕ್ಕಳ ತಂದೆತಾಯಿಗಳ ಕೌಟುಂಬಿಕ ಮತ್ತು ಸಾಮಾಜಿಕ ಹಿನ್ನೆಲೆಯು ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಬಡತನ, ಶೈಕ್ಶಣಿಕ ಹಿನ್ನೆಲೆ ಇಲ್ಲದಿರುವುದು ಇತ್ಯಾದಿ ಹಲವು ಸಂಗತಿಗಳು ಮಹತ್ವ ಪಡೆದಿರುತ್ತವೆ. ಹಾಗಾಗಿ ಕಲಿಕೆಯಲ್ಲಿ ವೈವಿಧ್ಯವಿರುತ್ತವೆ. ಹಿಂದುಳಿದ ಮತ್ತು ಮುಂದುವರಿದು ಕಲಿಯುವ ಮಕ್ಕಳಿರುತ್ತಾರೆ. ಇಂತಹ ವೈವಿಧ್ಯಮಯ ಹಿನ್ನೆಲೆಯುಳ್ಳ ಮಕ್ಕಳಿಗೆ ಕಲಿಸುವ ಹೊಣೆ ಶಿಕ್ಶಕರದಾಗಿರುತ್ತದೆ. ಹಿಂದುಳಿದವರನ್ನು ಮುಂದೆ ತರುವ ಹೊಣೆಯೂ ಅವರದೇ ಆಗಿರುತ್ತದೆ. ಎಲ್ಲರನ್ನು ಸಮಾನವಾಗಿ ಕಾಣುತ್ತ ಎಲ್ಲರಿಗೂ ಕಲಿಸಬೇಕಿರುತ್ತದೆ. ಆದರೆ ಹೆಚ್ಚು ನಿಗಾವಹಿಸಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿಲ್ಲ.

ಯಾಕೆಂದರೆ ಸರ್ಕಾರಿ ಶಾಲೆಗಳ ವ್ಯವಸ್ಥೆಯೇ ಅಂತಹದು. ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಅಯ್ದನೆಯ ತರಗತಿಯವರೆಗೆ ಒಟ್ಟು ಅಯ್ದು ತರಗತಿಗಳು ಇರುತ್ತವೆ. ಈ ಅಯ್ದು ತರಗತಿಗಳಿಗೂ ಒಬ್ಬರೇ ಶಿಕ್ಶಕರಿರುತ್ತಾರೆ. ಎಲ್ಲ ತರಗತಿಗಳಿಗೂ ಎಲ್ಲ ವಿಶಯಗಳನ್ನು ಅವರೊಬ್ಬರೇ ಕಲಿಸಬೇಕಿರುತ್ತದೆ. ಬಹುತೇಕ ಶಾಲೆಗಳಲ್ಲಿ ವಿಶಯವಾರು ಶಿಕ್ಶಕರು ಇರುವುದಿಲ್ಲ. ಇದರ ನಡುವೆ ಶಾಲೆಯ ಆಡಳಿತಾತ್ಮಕ ಕೆಲಸಗಳು, ಶಾಲೆಯ ಸ್ವಚ್ಚತೆಯ ಕೆಲಸ, ಬಿಸಿಯೂಟ ವಿತರಣೆ, ಜನಗಣತಿ, ಪ್ರವೇಶಾತಿ, ಚುನಾವಣೆ ಕೆಲಸಗಳು, ಪ್ರಾಕೃತಿಕ ವಿಕೋಪ ನಿರ್ವಹಣೆ; ಹೀಗೆ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಹೊಣೆಯನ್ನು ಶಿಕ್ಶಕರಿಗೆ ನೀಡಲಾಗುತ್ತದೆ. ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕಿರುತ್ತದೆ. ಅಧ್ಯಾಪಕರು ಈ ಕೆಲಸಗಳಲ್ಲಿ ತೊಡಗಿದಾಗ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವವರೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ಹೊರಗಡೆಯೇ ಉಳಿಯುವರು. ಈ ಸಂದರ್ಭದಲ್ಲಿ ತಂದೆತಾಯಿಗಳು ಅವರ ಕಲಿಕೆಯನ್ನು ನೋಡಿಕೊಳ್ಳುವ ಪರಿಸ್ಥಿತಿಯಿರುವುದಿಲ್ಲ. ಇತರೆ ಕೆಲಸಗಳಲ್ಲಿ ಅಧ್ಯಾಪಕರನ್ನು ತೊಡಗಿಸುವುದರಿಂದ ಅದು ಮಕ್ಕಳ ನುಡಿ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಶಕಗಳಿಂದಲೂ ಇದು ಮುಂದುವರಿದಿದ್ದು ಕನ್ನಡ ನುಡಿ ಕಲಿಕೆಯನ್ನು ಪಾತಾಳಕ್ಕೆ ಮುಟ್ಟಿಸಲಾಗಿದೆ.

ಈ ನಡುವೆ ಶಿಕ್ಶಕರು ಇತರರಂತೆ ಈ ಸಮಾಜ ಎಲ್ಲ ರೋಗಗಳನ್ನು ಮೈಗೂಡಿಸಿಕೊಂಡು ನೈತಿಕವಾಗಿ ದಿವಾಳಿಗೊಂಡಿರುವ ಉದಾಹರಣೆಗಳೂ ಇವೆ. ಅಂತಹವರು ತಾವು ಕಲಿಸುವ ಕೆಲಸಕ್ಕೆ ನೇಮಕಗೊಂಡಿದ್ದು ಆ ಕೆಲಸವನ್ನು ಹೊಣೆಗಾರಿಕೆಯಿಂದ ನಿಭಾಯಿಸಬೇಕೆಂಬ ಕನಿಶ್ಟ ಕಾಳಜಿಯಿಲ್ಲದ ಅಧ್ಯಾಪಕರಿದ್ದಾರೆ. ಇವರ ಪ್ರಮಾಣವೂ ದೊಡ್ಡದಿದೆ. ಇವರಿಂದಲೂ ಮಕ್ಕಳ ಕಲಿಕೆ ಕುಂಠಿತಗೊಳ್ಳುತ್ತಿದೆ. ಹಾಗೆಯೇ ಶೈಕ್ಶಣಿಕ ಆಡಳಿತ ನೋಡಿಕೊಳ್ಳುವ ಅಧಿಕಾರಶಾಹಿ ವರ್ಗ ಮತ್ತು ಅದರ ಉಸ್ತುವಾರಿ ನೋಡಿಕೊಳ್ಳುವ ಸಚಿವರು ಸಮಸ್ಯೆಗಳ ಆಳವನ್ನು ಅರಿತು ಅದನ್ನು ಬಗೆಹರಿಸಲು ಪ್ರಯತ್ನಿಸದೆ ಯಥಾಸ್ಥಿತಿಯನ್ನು ಕಾಪಾಡುತ್ತಿದ್ದಾರೆ. ಗುಣಾತ್ಮಕ ಶಿಕ್ಶಣ ನೀಡುವ ಬಗೆಗೆ ಕಾಳಜಿಯಿಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ಕಲಿಯವ ಮಕ್ಕಳ ಭಾಶಿಕ ಕೌಶಲಗಳ ಗುಣಮಟ್ಟ ಕುಸಿಯಲು ಕಾರಣವಾಗಿದೆ. ದುರಂತವೆಂದರೆ, ಮಕ್ಕಳು ತಮ್ಮ ಮೂರರಿಂದ ಹತ್ತನೆಯ ವಯಸ್ಸಿನ ಒಳಗೆ ಅಕ್ಶರಾಭ್ಯಾಸ ಮಾಡಿ ಓದು ಬರೆಹವನ್ನು ಕಲಿಯುತ್ತಾರೆ. ಈ ವಯಸ್ಸಿನಲ್ಲಿ ಅವರ ಕಲಿಕೆಯ ವೇಗವೂ ಹೆಚ್ಚಿರುತ್ತದೆ. ಯಾವುದೇ ಅಂಜಿಕೆ ಕೀಳರಿಮೆಗಳಿಲ್ಲದೆ ಕಲಿಯುತ್ತಾರೆ. ಆದರೆ ಇದೇ ವಯಸ್ಸಿನಲ್ಲಿ ಮಕ್ಕಳು ಕಲಿಕೆಯಿಂದ ದೂರ ಇರುವ ಇಲ್ಲವೇ ವಂಚನೆಗೆ ಒಳಗಾಗುವ ಸ್ಥಿತಿಯಿದೆ. ಹೊಣೆಗಾರಿಕೆಯಲ್ಲಿದ ಅಧ್ಯಾಪಕರು ಮತ್ತು ಹೊಣೆಗೇಡಿತನದ ಆಡಳಿತ ವ್ಯವಸ್ಥೆ ಮಕ್ಕಳ ಕಲಿಕೆಯನ್ನು ನಾಶ ಮಾಡುತ್ತಿದೆ. ಮಕ್ಕಳು ಚನ್ನಾಗಿ ಕಲಿಯಲು ಬೇಕಾದ ಪರಿಸರ ರೂಪಿಸದೆ ಮಕ್ಕಳನ್ನು ದೂಶಿಸಿದರೆ ಪ್ರಯೋಜನವಿಲ್ಲ.

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಅದೇನೆಂದರೆ ಶಿಕ್ಶಣದಲ್ಲಿ ಭಾಶೆಗಳು ಅಶ್ಟೊಂದು ಮುಖ್ಯವಲ್ಲ. ಅವು ಕೋರ್ ವಿಶಯಗಳಿಗೆ ಪೂರಕವೆಂಬ ನಂಬಿಕೆ ಪೋಶಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿಯೂ ಬೆಳೆದಿದೆ. ಅದು ಶಿಕ್ಶಣ ವ್ಯವಸ್ಥೆಯಲ್ಲಿಯೇ ಇದೆ. ಇದಕ್ಕೆ ಒಂದು ಎತ್ತುಗೆಯನ್ನು ಗಮನಿಸಬಹುದು. ಪದವಿ ಹಂತದಲ್ಲಿ ಎಲ್ಲ ಕೋರ್ಸುಗಳಿಗೆ ಅದರದೇ ಆದ ಪಠ್ಯಕ್ರಮ ಇರುತ್ತದೆ. ಅದಕ್ಕೆ ತಕ್ಕನಾದ ನುಡಿನೀತಿ ಇರುತ್ತದೆ. ಇದರಲ್ಲಿ ಕನ್ನಡವು ಪ್ರಥಮ ಭಾಶೆಯೋ, ದ್ವಿತೀಯ ಭಾಶೆಯೋ ಆಗಿರುತ್ತದೆ. ಹಾಗೆಯೇ ಅದು ಸಾಫ್ಟ್ ಕೋರೋ ಇಲ್ಲವೇ ಹಾರ್ಡ್ ಕೋರೋ? ಎಂಬುದು ನಿರ್ಧಾರವಾಗುತ್ತದೆ. ಅಂದರೆ ‘ಕೋರ್ ವಿಶÀಯ’ಗಳ ಜೊತೆಗೆ ಕನ್ನಡ ಬರುವುದೇ ಇಲ್ಲ! ಅಂದರೆ ನಮ್ಮ ಪಠ್ಯಕ್ರಮದಲ್ಲಿಯೇ ಭಾಶೆಯನ್ನು ಕೋರ್ ವಿಶಯವಾಗಿ ಪರಿಗಣಿಸಿಲ್ಲ. ಪದವಿಪೂರ್ವ ಹಂತದಲ್ಲಿಯೂ ಅಶ್ಟೇ. ಯಾವ ವಿದ್ಯಾರ್ಥಿಗೂ ಕನ್ನಡ ಇಲ್ಲವೇ ನುಡಿ ಕಲಿಕೆ ಮುಖ್ಯ ಅನ್ನಿಸುವುದೇ ಇಲ್ಲ. ಇದು ಕನ್ನಡ ಕಲಿಕೆಯ ಆಸಕ್ತಿಯನ್ನೇ ಕೊಂದು ಹಾಕಿದೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಶೆಯಾಗಿ ನಿಗದಿಗೊಳಿಸಿದ ಸಂದರ್ಭದಲ್ಲಿ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಯಾಕೆಂದರೆ ಅದಕ್ಕೆ ಪರೀಕ್ಶೆಯೂ ಇರಲಿಲ್ಲ. ಪಾಸಾಗುವುದು ಕಡ್ಡಾಯವೂ ಇರಲಿಲ್ಲ. ಇದು ವಾಸ್ತವ ಸ್ಥಿತಿ.

ಈ ನಡುವೆ ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಶಣದವರೆಗೆ ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ. ಹಾಗೆ ಅನುತ್ತೀರ್ಣಗೊಳಿಸಿದರೆ ಅದಕ್ಕೆ ಅಧ್ಯಾಪಕರನ್ನೇ ಹೊಣೆಯಾಗಿಸಲಾಗುತ್ತದೆ. ಇದರಿಂದ ಬೇಸತ್ತ ಅಧ್ಯಾಪಕರು ಮಕ್ಕಳನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮಕ್ಕಳಿಗೆ ಭಾಶೆಯ ತಿಳುವಳಿಕೆ, ಅಕ್ಶರ ಜ್ಞಾನವಿಲ್ಲದಿದ್ದರೂ ಅವರನ್ನು ಮುಂದಿನ ತರಗತಿಗಳಿಗೆ ಪ್ರಮೋಟ್ ಮಾಡಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಶೆಯಲ್ಲಿಯೂ ಇದು ನಡೆದಿದೆ. ಉತ್ತೀರ್ಣರಾದವರ ‘ಪ್ರಮಾಣ ಹೆಚ್ಚಳ’ದ ಕಿರೀಟವನ್ನು ತೊಡುವ ಮಹತ್ವಾಕಾಂಕ್ಶೆಯ ಕಾರಣಕ್ಕೆ ಅಡ್ಡದಾರಿಗಳಲ್ಲಿ ಹೆಜ್ಜೆ ಹಾಕಲಾಗುತ್ತದೆ. ‘ಮಕ್ಕಳಿಗೆ ಕಲಿಸಬೇಕು’ ಎಂಬುದು ಮುಖ್ಯ ಆಶಯವಾಗಬೇಕೆ ಹೊರತು ಉತ್ತೀರ್ಣಗೊಳಿಸುವುದು ಮಾನದಂಡವಾಗಬಾರದು. ಕಲಿಯದವರನ್ನೂ ಪ್ರಮೋಟ್ ಮಾಡುವುದರಿಂದ ಕಲಿತವರು, ಕಲಿಯದವರಿಬ್ಬರೂ ಮುಂದಿನ ತರಗತಿಗಳಿಗೆ ಸೇರ್ಪಡೆಯಾಗುತ್ತಾರೆ. ಕಲಿಯದವರನ್ನೂ ಪ್ರಮೊಟ್ ಮಾಡುವುದರಿಂದ ಶಿಕ್ಶಣದ ಗುಣಮಟ್ಟವು ಕುಸಿತಗೊಂಡಂತೆ ಭಾಸವಾಗುತ್ತದೆ. ಹೀಗೆ ಪ್ರಮೊಟ್ ಮಾಡುವುದರ ಹಿಂದೆ ಇನ್ನೊಂದು ಹುನ್ನಾರವೂ ಅಡಗಿರುವಂತಿದೆ. ಅದೇನೆಂದರೆ ಕಟ್ಟುನಿಟ್ಟಿನಿಂದ ಮೌಲ್ಯಮಾಪನ ಮಾಡಿದರೆ ಪಾಸಾಗುವವರ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮುಂದಿನ ತರಗತಿಗಳು ಖಾಲಿ ಬೀಳುತ್ತವೆ. ಎತ್ತುಗೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಪ್ರಮಾಣ ಕಡಿಮೆಯಾದರೆ ಪದವಿ ಪೂರ್ವಶಿಕ್ಶಣ ಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಉತ್ತೀರ್ಣತೆಯ ಪ್ರಮಾಣ ಹೆಚ್ಚಿದ್ದರೆ ಪದವಿಪೂರ್ವ ಶಿಕ್ಶಣಕ್ಕೆ ಬೇಡಿಕೆ ಹೆಚ್ಚುತ್ತದೆ. ಹಾಗಾಗಿ ಪ್ರೌಢ ಶಿಕ್ಶಣದ ಹಂತದಲ್ಲಿ ಹೆಚ್ಚು ಜನರನ್ನು ಪಾಸು ಮಾಡುವ ಗುರಿಯನ್ನು ಹೊಂದಿರುವ ಸಾಧ್ಯತೆಯೂ ಇದೆ. ಇದರಲ್ಲಿ ಖಾಸಗಿ ಶಿಕ್ಶಣ ಸಂಸ್ಥೆಗಳ ಪಾತ್ರವೂ ದೊಡ್ಡದಿದೆ.

ಪ್ರಾಥಮಿಕ ಶಿಕ್ಶಣದ ಹಂತ ದಾಟಿದ ಕೂಡಲೇ ಮಾಧ್ಯಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಶಣ ಹಂತದಲ್ಲಿ ಭಾಶಾ ಪಠ್ಯಗಳನ್ನು ಬೋಧಿಸಲಾಗುತ್ತದೆ. ಈ ಹಂತದಲ್ಲಿ ಮಕ್ಕಳಿಗೆ ಓದುವ ಬರೆಯುವ ನುಡಿ ಕೌಶಲಗಳನ್ನು ಕಲಿಸಲಾಗುವುದಿಲ್ಲ. ಕಲಿಸುವ ಆಶಯವನ್ನು ಅಧ್ಯಾಪಕರು ಹೊಂದಿರುವುದಿಲ್ಲ. ಅಲ್ಲಿ ಕೇವಲ ನಿಗದಿತ ಪಠ್ಯಪುಸ್ತಕಗಳನ್ನು ಬೋಧಿಸುವುದು; ಪರೀಕ್ಶೆ ಮಾಡಿ ಅವರನ್ನು ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ. ಪರೀಕ್ಶೆಗಳಿಗೆ ಎಶ್ಟುಬೇಕೋ ಅಶ್ಟನ್ನು ಮಾತ್ರ ಬೋಧಿಸಿದ ಶಾಸ್ತ್ರ ಮುಗಿಸಿ ಪರೀಕ್ಶೆ-ಮೌಲ್ಯಮಾಪನದ ಆಟವಾಡಿ ಮುಂದಿನ ತರಗತಿಗಳಿಗೆ ಕಳುಹಿಸಲಾಗುತ್ತದೆ. ಅದರಲ್ಲಿಯೂ ಸೆಮೆಸ್ಟರ್ ಪದ್ದತಿಯಲ್ಲಿ ಈ ಅವ್ಯವಸ್ಥೆ ಇನ್ನೂ ಜೋರಾಗಿದೆ. ಈ ಹಂತದಲ್ಲಿ ಸಾಹಿತ್ಯ ಪಠ್ಯಗಳನ್ನು ಕಲಿಸಲಾಗುತ್ತದೆ. ಇಲ್ಲಿ ಕಲಿಸುವ ಪಠ್ಯಗಳನ್ನು ಓದುವ ಗ್ರಹಿಸುವ ಕಸುವು ಮಕ್ಕಳಲ್ಲಿರುವುದಿಲ್ಲ. ಯಾಕೆಂದರೆ ಪ್ರಾಥಮಿಕ ಹಂತದಲ್ಲಿ ಅವರಿಗೆ ಓದುವ ಬರೆಯುವ ಕಸುವೇ ಬೆಳೆದಿರುವುದಿಲ್ಲ. ಅಲ್ಲಿ ಯಾವುದೇ ಫಿಲ್ಟರ್ ಇಲ್ಲದೆ ಬಡ್ತಿಯಾಗಿ ಬಂದಿರುವುದರಿಂದ ಅದು ಈ ಹಂತದ ಕಲಿಕೆಯ ಮೇಲೂ ಕೆಟ್ಟ ಪ್ರಭಾವ ಬೀರುತ್ತದೆ. ಹೀಗಿರುವಾಗ ಅಧ್ಯಾಪಕರ ಸಾಹಿತ್ಯದ ಪಾಠ ಕೇಳಿ ಓದುವ ಆಸಕ್ತಿ ಹುಟ್ಟಲು ಸಾಧ್ಯವೇ? ಓದಲು ಬರೆಯಲು ಬಾರದವರಿಂದ ಸಾಹಿತ್ಯ ಓದುವುದನ್ನು ನಿರೀಕ್ಶಿಸಲಾದೀತೆ?

ಹಾಗಾಗಿ ಮಾಧ್ಯಮಿಕ ಹಂತದ ನಂತರ ಬೋಧಿಸುವ ಯಾವುದೇ ಸಾಹಿತ್ಯ ಪಠ್ಯಗಳು ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನೂ ಬೆಳೆಸುವುದಿಲ್ಲ. ಅವರಲ್ಲಿ ಓದು ಬರೆಹಗಳ ಮೂಲಭೂತ ಸಮಸ್ಯೆಯೇ ಬಗೆಹರಿಯದಾಗ ಸಾಹಿತ್ಯಾಸಕ್ತಿ ಮೂಡಲು ಸಾಧ್ಯವಿಲ್ಲ. ಇದಕ್ಕೆ ಅಪವಾದಕ್ಕೆ ಎಂಬಂತೆ ಎಲ್ಲೋ ಕೆಲವರು ಮಾತ್ರ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುತ್ತಾರೆ. ಅಂದರೆ ಪ್ರಾಥಮಿಕ ಹಂತದಲ್ಲಿ ಅಕ್ಶರ ಜ್ಞಾನ, ಬರೆಹದ ಸಾಮಥ್ರ್ಯ ಪಡೆದವರು ಮಾತ್ರ ಪದವಿ ಹಂತದಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಉಳಿದಂತೆ ಪದವಿ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಭಾಶಾ ಕೌಶಲಗಳನ್ನು ಸುಧಾರಣೆ ಮಾಡಿಕೊಳ್ಳುವುದಿಲ್ಲ. ಜೊತೆಗೆ ಓದಿನ ಅಭಿರುಚಿ ಮತ್ತು ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಳ್ಳುವುದಿಲ್ಲ. ಈ ಸಮಸ್ಯೆ ಗಂಭೀರವಾಗಿರುವುದರಿಂದಲೇ ನಮ್ಮ ರಾಜ್ಯದಲ್ಲಿ ಕನ್ನಡದ ‘ಅಕ್ಶರಸ್ಥ’ರ ಪ್ರಮಾಣ ಹೆಚ್ಚಿದರೂ ಓದುಗರ ಸಂಖ್ಯೆ ಹೆಚ್ಚಿಲ್ಲ. ಕನ್ನಡ ಎಂ.ಎ. ಪದವಿ ತರಗತಿಗಳಲ್ಲಿ ಒಂದೂ ಸಾಹಿತ್ಯ ಕೃತಿಯನ್ನು ಓದದವರು ಇರುತ್ತಾರೆ. ಮೂಲ ಪಠ್ಯಗಳನ್ನೇ ಓದದೆ ಪರೀಕ್ಶೆಯನ್ನು ಪಾಸು ಮಾಡುತ್ತಾರೆ. ಹಾಗಾದರೆ ಕನ್ನಡ ಭಾಶಾ ಬೋಧನೆಯ ಫಲಿತಗಳೇನು? ಇದಕ್ಕೆ ಉತ್ತರಿಸುವುದು ಬಹಳ ಕಶ್ಟವಾಗುತ್ತಿದೆ. ದುರಂತವೆಂದರೆ ಹೀಗೆ ಕಲಿತವರೇ ನಾಳೆ ಶಿಕ್ಶಕರಾಗುತ್ತಾರೆ. ಅವರು ತಮ್ಮ ಮುಂದಿನ ಪೀಳಿಗೆಗೆ ಭಾಶೆ ಮತ್ತು ಸಾಹಿತ್ಯವನ್ನು ಬೋಧಿಸುವವರಾಗುತ್ತಾರೆ. ಇಂತಹ ಕಡೆ ಸೃಜನಶೀಲ ಬೋಧನೆ ಮತ್ತು ಕಲಿಕೆ ಸಾಧ್ಯವಾಗುವುದೇ? ಇನ್ನು ಜ್ಞಾನದ ಎಲ್ಲೆಗಳನ್ನು ವಿಸ್ತರಿಸುವುದಾದರೂ ಹೇಗೆ?

ಈ ಮೇಲಿನ ವಿವರಣೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಕನ್ನಡ ಭಾಶಾ ಬೋಧನೆಯು ನುಡಿ ಕೌಶಲಗಳನ್ನು, ಸಾಹಿತ್ಯ-ಸಂಸ್ಕøತಿಯ ಅರಿವನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನವನ್ನು ಮಾಡುವುದಿಲ್ಲ. ಕಲಿಕೆಯಲ್ಲಿ ಹಿಂದೆ ಬೀಳುವ ಮಕ್ಕಳಿಗೆ ವಿಶೇಶ ಆದ್ಯತೆ ನೀಡಿ ಅವರನ್ನು ಸುಧಾರಿಸುವುದೂ ಅಲ್ಲ. ಮಕ್ಕಳು ಕಲಿಯುವಂತೆ ನಿಗಾವಹಿಸುವುದೂ ಅಲ್ಲ. ಬದಲಿಗೆ ನಿಯಮಿತವಾದ ಕಾಲಕ್ಕೆ ಪರೀಕ್ಶೆ. ಅದಕ್ಕೊಂದಿಶ್ಟು ಪಾಠಗಳ ಸಾರಾಂಶ ಹೇಳುವುದು. ಒಂದಿಶ್ಟು ಪ್ರಶ್ನೆಗಳನ್ನು ಪರೀಕ್ಶೆಯ ಹೆಸರಿನಲ್ಲಿ ಕೇಳುವುದು. ವಿದ್ಯಾರ್ಥಿಗಳು ಬೇಕಾಬಿಟ್ಟಿಯಾಗಿ ಉತ್ತರಿಸಿದ್ದರೂ ಅವರನ್ನು ಪಾಸು ಮಾಡುವುದು. ಅಂದರೆ ಬೋಧನೆ ಮತ್ತು ನುಡಿ ಕಲಿಕೆ ಒಂದು ಯಾಂತ್ರಿಕವಾದ ಆಚರಣೆಯಾಗಿದ್ದು ಅದು ತನ್ನ ಗುಣಮಟ್ಟವನ್ನು ಕಾಪಾಡಿಕೊಂಡಿಲ್ಲ. ಇಲ್ಲಿ ನಿಜಕ್ಕೂ ಬಲಿಪಶುವಾಗುವುದು ಮಕ್ಕಳು ಮತ್ತು ಕನ್ನಡ ನುಡಿ. ಇದರ ಪರಿಣಾಮವೆಂದರೆ ಕಲಿತವರಲ್ಲಿ ನುಡಿ ಕಸುವು ಸರಿಯಾಗಿ ಬೆಳೆಯದಿದ್ದರೆ ಕೊನೆಗೆ ಕನ್ನಡ ಬಳಸುವುದನ್ನು ನಿಲ್ಲಿಸುತ್ತಾರೆ. ಅರೆಬರೆ ಕಲಿಕೆಯಿಂದ ಒಂದು ಬಗೆಯ ಕೀಳರಿಮೆ ಮತ್ತು ಅಸಡ್ಡೆತನಗಳು ಬೆಳೆದಿರುತ್ತದೆ. ಕೊನೆಗೆ ಕಲಿತ ಕನ್ನಡದ ಬಳಕೆಯನ್ನೇ ನಿಲ್ಲಿಸುತ್ತಾರೆ. ಅಕ್ಶರಸ್ಥರಾಗಿದ್ದರೂ ಅನಕ್ಶರಸ್ಥರಂತೆ ಜೀವಿಸುತ್ತಾರೆ.

ಇದಕ್ಕೆ ಅಧ್ಯಾಪಕರ ಮತ್ತು ಆಡಳಿತಗಾರರ ಹೊಣೆಗೇಡಿತನಗಳೇ ಕಾರಣ. ಬೋಧನೆ ಮತ್ತು ಮೌಲ್ಯಮಾಪನ ವಿಧಾನಗಳನ್ನು ಸರಿಯಾಗಿ ಪಾಲಿಸದೇ ಇರುವುದು ಇದಕ್ಕೆ ಕಾರಣ. ಇಂತಹ ಹೊಣೆಗೇಡಿತನದಿಂದ ಕಲಿಕೆಯ ವ್ಯವಸ್ಥೆಯನ್ನು ನಾಶಮಾಡಿದರೆ ಸಮುದಾಯದ ಭಾಶೆ ಮತ್ತು ಅದರ ಜ್ಞಾನವ್ಯವಸ್ಥೆಯನ್ನು ನಾಶ ಮಾಡಲು ವೇದಿಕೆ ರೂಪಿಸಿದಂತಿರುತ್ತದೆ. ಇದರಿಂದ ಹಲವು ತಲೆಮಾರುಗಳು ತೀವ್ರವಾದ ಭಾಶಿಕ ಮತ್ತು ಸಮಾಜೋ ಸಾಂಸ್ಕøತಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಜನನುಡಿಗಳ ಭಾಶಿಕ ತಳಹದಿ ದುರ್ಬಲವಾಗುತ್ತದೆ. ಅಲ್ಲಿ ಹೊಸಚಿಂತನೆಗಳೂ ಹುಟ್ಟದೆ ಬರಡುತನವನ್ನು ಎದುರಿಸುತ್ತ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಯಾವುದೋ ಅನ್ಯಭಾಶೆಯನ್ನು ದೂರಲು ಸಾಧ್ಯವಿಲ್ಲ. ಕನ್ನಡ ಭಾಶೆಯ ಮಹತ್ವ, ಅದರಿಂದ ಕಲಿಯಬೇಕಾದ ಶಿಕ್ಶಣ ಮತ್ತು ಅದನ್ನು ಗಟ್ಟಿಗೊಳಿಸುವ ಮೂಲಕ ಇಡೀ ಕನ್ನಡ-ಕರ್ನಾಟಕಗಳನ್ನು ದೃಢವಾಗಿ ನೆಲೆಗೊಳಿಸಬೇಕಾದ ಅಗತ್ಯವನ್ನು ಅರಿಯದೇ ತೋರಿರುವ ಸಾಮುದಾಯಿಕ ಬೇಜವಾಬ್ದಾರಿತನ ಈ ಭಾಶಿಕ ಬಿಕ್ಕಟ್ಟು ಸೃಶ್ಟಿಯಾಗಲು ಕಾರಣ. ನಿಡುಗಾಲದಲ್ಲಿ ಇದು ತಂದೊಡ್ಡುವ ಅಪಾಯಗಳನ್ನು ಅರಿಯದೆ ಎಲ್ಲರೂ ಆ ಕ್ಶಣದ ಲಾಭನಶ್ಟಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಇಂದು ಕನ್ನಡ ಭಾಶಿಕ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಕೊನೆಯೇ ಇಲ್ಲದಂತಾಗಿ ಕನ್ನಡದ ಬೇರುಗಳು ಟೊಳ್ಳಾಗಿವೆ. ಹೀಗಿರುವಾಗ ಕನ್ನಡವನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಭದ್ರವಾಗಿ ಬೇರೂರಿಸುವುದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ.

ಇಲ್ಲಿನ ಮುಖ್ಯ ಸಮಸ್ಯೆಯೆಂದರೆ ಕನ್ನಡವನ್ನು ಜ್ಞಾನದ ಭಾಶೆಯಾಗಿಯೂ ಪರಿಗಣಿಸಿಲ್ಲ. ಅದು ಅನ್ನದ, ಉದ್ಯೋಗದ ಭಾಶೆಯಾಗಿಯೂ ಕಾಣುತ್ತಿಲ್ಲ. ಇಂಗ್ಲಿಶ್ ಮಾಧ್ಯಮದ ದಾಳಿ ಕನ್ನಡವನ್ನು ಒಂದು ಭಾಶೆಯಾಗಿ ಕಲಿಯವುದರ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇಂದು ನುಡಿಯನ್ನು ಸ್ಥಳೀಯ ಸಂವಹನದ ಅಗತ್ಯಕ್ಕಿಂತ ಜಾಗತಿಕ ಸಂವಹನದ ಉದ್ದೇಶವನ್ನಿರಿಸಿಕೊಂಡು ಆ ಬಗೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ವಿಶ್ವಮಾರುಕಟ್ಟೆಯ ಸಂವಹನದ ಅಗತ್ಯದ ಬಗೆಗೆ ಹೆಚ್ಚು ಮಾತನಾಡಲಾಗುತ್ತದೆ. ಇಂಗ್ಲಿಶ್ ಗಳಿಕೆಯ ಆಸಕ್ತಿ ಹೆಚ್ಚಿದಂತೆ ಕನ್ನಡದ ಕಲಿಕೆ ಬಗೆಗಿನ ಆಸಕ್ತಿ ಕುಗ್ಗುತ್ತಿದೆ. ಜಾಗತಿಕ ಮಾರುಕಟ್ಟೆ ಬೆಳೆದಶ್ಟು ಕನ್ನಡದಂತಹ ಸ್ಥಳೀಯ ಜ್ಞಾನದ, ಲೋಕದೃಶಿಯ ಭಾಶೆಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ಕನ್ನಡಿಗರನ್ನೇ ಕನ್ನಡದ ವಿರುದ್ಧ ಎತ್ತಿ ಕಟ್ಟುವ ಮೂಲಕ ಇದನ್ನು ಸಾಧಿಸಲಾಗುತ್ತಿದೆ. ಹಾಗಾಗಿ ಕನ್ನಡದ ಉಳಿವಿನ ಗುದ್ದಾಟ ಕನ್ನಡಿಗರ ಜೊತೆಗೆ ನಡೆಯುವಂತಾಗಿದೆ. ಇಂದು ವೇಗವಾಗಿ ಬೆಳೆಯುತ್ತಿರುವ ನವ ಮಧ್ಯಮ ವರ್ಗಕ್ಕೆ ಕನ್ನಡ ಕೀಳರಿಮೆಯ ಭಾಶೆ. ಸಾಮಾಜಿಕ ಸಂವಹನದ ಪ್ರತಿಶ್ಟೆಯ ಭಾಶೆಯಾಗಿ ಇಂಗ್ಲಿಶ್ ಅನ್ನು ಆಯ್ಕೆ ಮಾಡಿಕೊಂಡಿದೆ. ಈ ವರ್ಗಕ್ಕೆ ಕನ್ನಡವನ್ನು ಒಂದು ಭಾಶೆಯಾಗಿ ಕಲಿಯುವ ಒತ್ತಡವಿಲ್ಲ. ಇಂಗ್ಲಿಶ್, ಸಂಸ್ಕøತ ಮತ್ತು ಇತರೆ ವಿದೇಶಿ ಭಾಶೆಗಳ ಒಲವು ಹೆಚ್ಚಿದೆ. ಸಾಮಾಜಿಕವಾಗಿ ಹಿಂದುಳಿದ ಜನರು ಇತ್ತ ಕನ್ನಡವನ್ನು ಸರಿಯಾಗಿ ಕಲಿಯದೆ ಇಂಗ್ಲಿಶ್ ಅನ್ನು ಕಲಿಯಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಹೀಗೆ ಹಲವು ಸಂಗತಿಗಳು ಕನ್ನಡದ ಕಲಿಕೆಯ ಮೂಲ ಉದ್ದೇಶಗಳನ್ನೇ ನಾಶ ಮಾಡಿವೆ. ಕರ್ನಾಟಕದ ಏಕೀಕರಣದ ಕನಸುಗಾರರು ಶಿಕ್ಶಣದ ಮೂಲಕ ತಮ್ಮ ನುಡಿಯನ್ನು ನಾಡನ್ನೂ ಬೆಸೆದು ಸುಭದ್ರ ನಾಡು ಕಟ್ಟಲು ಆಶಿಸಿದ್ದರು. ಇಂದು ಆ ಕನಸು ನುಚ್ಚುನೂರಾಗಿದೆ. ಇದು ಬದಲಾಗಬೇಕಾದರೆ ಮೊದಲು ಹದಗೆಟ್ಟಿರುವ ಭಾಶಾ ಬೋಧನೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸರಿಮಾಡಬೇಕು. ಪ್ರಾಥಮಿಕ ಹಂತದಲ್ಲಿ ನುಡಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲಿ ಭಾಶಾ ಕೌಶಲಗಳನ್ನು ಚನ್ನಾಗಿ ಕಲಿತರೆ ಮುಂದಿನ ಹಂತದಲ್ಲಿ ಸಾಹಿತ್ಯವನ್ನು ಬೋಧಿಸಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಸಾಧ್ಯವಾಗುತ್ತದೆ. ಆ ಮೂಲಕ ಕನ್ನಡದ ಬೇರುಗಳನ್ನು ಗಟ್ಟಿಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಮೊದಲು ಹದಗೆಟ್ಟಿರುವ ಕನ್ನಡ ಬೋಧನೆ ಮತ್ತು ಕಲಿಕೆಯನ್ನು ಸೃಜನಶೀಲಗೊಳಿಸಬೇಕು. ಭಾಶೆಯ ಮಹತ್ವವನ್ನು ಎಲ್ಲರೂ ಅರಿಯಬೇಕು. ಕಲಿಕೆಯ ಹಂತದಲ್ಲಿ ಕನ್ನಡವನ್ನು ಗರಿಶ್ಟ ಬಳಕೆಯ ನುಡಿಯನ್ನಾಗಿಸಬೇಕು. ಸೊರಗಿರುವ ಗಿಡಕ್ಕೆ ಹೊಸ ಮಣ್ಣು ಗೊಬ್ಬರ ಹಾಕಿ ನೀರು ಹರಿಸಿ ಅದಕ್ಕೆ ಮರುಜೀವ ನೀಡುವಂತೆ ಕನ್ನಡ ನುಡಿಗೂ ಕಲಿಕೆಗೂ ಜೀವ ತುಂಬಬೇಕಿದೆ. ಅದನ್ನು ಮಾಡದೆ ರಾಜ್ಯೋತ್ಸವದ ನೆಪದಲ್ಲಿ ವೀರೋಚಿತ ಭಾಶಣಗಳನ್ನು ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ